ADVERTISEMENT

ರೈತ ಮಹಿಳೆ ಜಯಶ್ರೀ ಬಿಜೆಪಿ ಬಳಿಯಿಂದ ಎಷ್ಟು ಹಣ ಪಡೆದಿರಬಹುದು?: ಜೆಡಿಎಸ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 13:50 IST
Last Updated 21 ನವೆಂಬರ್ 2018, 13:50 IST
   

ಮಡಿಕೇರಿ: ‘ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತ ಮಹಿಳೆ ಜಯಶ್ರೀಗೆ ನಿಂದಿಸಿರುವ ಪ್ರಕರಣ ಮಾಸುವ ಮುನ್ನವೇ ಜೆಡಿಎಸ್‌ ಕೊಡಗು ಜಿಲ್ಲಾ ಘಟಕವು ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಅದೇ ಮಹಿಳೆಯನ್ನು ನಿಂದಿಸಿ ಪೋಸ್ಟ್‌ ಹಾಕಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಯಶ್ರೀ ಅವರ ರಾಜ್ಯ ರೈತ ಸಂಘದ ಗುರುತಿನ ಚೀಟಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರವನ್ನೂ ಹಾಕಲಾಗಿದೆ.

‘ಡೀಲ್‌ ರಾಣಿ ಸದಸ್ಯತ್ವ ಪಡೆದಿದ್ದು 31ನೇ ಅ. 2018’ ಎಂದು ಬರೆಯಲಾಗಿದೆ. ‘ಕೇವಲ 20 ದಿನಗಳಲ್ಲಿ ಅಕ್ಕ ಇಷ್ಟು ದೊಡ್ಡ ಹೋರಾಟ ಮಾಡಲು ಬಿಜೆಪಿ ಬಳಿಯಿಂದ ಎಷ್ಟು ಹಣ ಪಡೆದಿರಬಹುದು...? ಎಂದು ಪ್ರಶ್ನಿಸಲಾಗಿದೆ. ಯಡಿಯೂರಪ್ಪ ಭಾವಚಿತ್ರದ ಕೆಳಗೆ ‘ಕುಮಾರಸ್ವಾಮಿ ಅವರೇ ಹೇಗಿತ್ತು ನನ್ನ ... ಆಟ...’ ಎಂದು ಬರೆಯಲಾಗಿದೆ.

ADVERTISEMENT

ಈ ಪೋಸ್ಟ್‌ ಅನ್ನು 400ಕ್ಕೂ ಹೆಚ್ಚು ಮಂದಿ ಶೇರ್‌ ಮಾಡಿದ್ದರೆ, 318 ಮಂದಿ ಲೈಕ್‌ ಮಾಡಿದ್ದಾರೆ. 75 ಮಂದಿ ಪ್ರತಿಕ್ರಿಯಿಸಿದ್ದಾರೆ. ಆಕ್ರೋಶ ಹೆಚ್ಚಾದ ಬೆನ್ನಲೇ ಪೋಸ್ಟ್‌ ಅನ್ನು ಡಿಲೀಟ್‌ ಮಾಡಲಾಗಿದೆ.

‘ಪಕ್ಷಕ್ಕೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳು ನಮ್ಮ ಪೇಜ್‌ಗೆ ಶೇರ್‌ ಮಾಡಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ‘ನಾನು ಆ ಮಹಿಳೆಯನ್ನು ನಾಲ್ಕು ವರ್ಷದಿಂದ ನಿದ್ರೆ ಮಾಡುತ್ತಿದ್ರಾ ಎಂಬ ಅರ್ಥದಲ್ಲಿ ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದು.

**

ಅವಹೇಳನ ನೋವು ತಂದಿದೆ: ಜಯಶ್ರೀ ಗುರಣ್ಣವರ

ಬೆಳಗಾವಿ: ‘ನನ್ನ ವಿರುದ್ಧ ಜೆಡಿಎಸ್‌ನವರು ಸೇರಿದಂತೆ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಅವಹೇಳನ ಮಾಡುತ್ತಿದ್ದಾರೆ. ಈ ಬೆಳವಣಿಗೆ ನೋವು ತಂದಿದೆ’ ಎಂದು ರೈತ ಮಹಿಳೆ ಜಯಶ್ರೀ ಗುರಣ್ಣವರ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನನ್ನ ಬಳಿ ₹ 1 ಲಕ್ಷ ಮೌಲ್ಯದ ಐಫೋನ್ ಇದೆ. ಬಿಜೆಪಿಯವರು ಪ್ರಾಯೋಜಕತ್ವ ನೀಡಿದ್ದಾರೆ ಎಂದೆಲ್ಲಾ ಟೀಕಿಸಲಾಗುತ್ತಿದೆ. ದೃಶ್ಯ ಮಾಧ್ಯಮವೊಂದರ ಪ್ರಸಾರದ ವೇಳೆ, ಆ ವಾಹಿನಿಯ ವರದಿಗಾರರ ಕೊಟ್ಟ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಆ ಐ ಫೋನ್ ನನ್ನದಲ್ಲ. ನಾನು ಬಿಜೆಪಿ ಕಾರ್ಯಕರ್ತೆಯಲ್ಲ. ರೈತ ಸಂಘದಲ್ಲಿ 10 ವರ್ಷಗಳಿಂದಲೂ ಸಕ್ರಿಯವಾಗಿದ್ದೇನೆ. ಯಾರದೋ ಆಮಿಷಕ್ಕೆ ಒಳಗಾಗಿ ಹೋರಾಟ ಮಾಡುತ್ತಿಲ್ಲ’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.