ADVERTISEMENT

ಅಭ್ಯರ್ಥಿಗೆ ಆಮಿಷ: ಜೆಡಿಎಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:38 IST
Last Updated 21 ನವೆಂಬರ್ 2019, 2:38 IST
ಎಚ್‌.ಕೆ.ಕುಮಾರಸ್ವಾಮಿ
ಎಚ್‌.ಕೆ.ಕುಮಾರಸ್ವಾಮಿ   

ಬೆಂಗಳೂರು:ಮಹಾಲಕ್ಷ್ಮಿ ಲೇಔಟ್‌ನ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರು ಜೆಡಿಎಸ್‌ಅಭ್ಯರ್ಥಿಗೆ ಆಮಿಷ ಒಡ್ಡಿಪಕ್ಷಕ್ಕೆ ಸೆಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಆರೋಪಿಸಿದರು.

ಬಸವೇಶ್ವರ ನಗರ ಸರ್ಕಲ್ ಇನ್‌ಸ್ಪೆಕ್ಟರ್‌ ಮೂಲಕ ನಮ್ಮ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿಸಲಾಗಿದೆ. ಆದರೆ ಇಂತಹ ಕೃತ್ಯಗಳಿಗೆ ಹೆದರುವ ಪ್ರಶ್ನೆ ಇಲ್ಲ ಎಂದು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯಶವಂತಪುರದ ಪಕ್ಷದ ಅಭ್ಯರ್ಥಿ ಜವರಾಯಿಗೌಡರು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಜತೆಗೆ ಅವರೊಬ್ಬ ಬಲಿಷ್ಠ ಅಭ್ಯರ್ಥಿ ಎಂಬುದು ಬಿಜೆಪಿಗೆ ಅರ್ಥ ಆಗಿದೆ. ಹೀಗಾಗಿಯೇ ಬಿಜೆಪಿ ಅವರನ್ನು ಆಪರೇಷನ್‌ ಮಾಡಲು ಯತ್ನಿಸಿದೆ. ಆದರೆ ಅವರು ಇಂತಹ ಆಮಿಷ
ಗಳಿಗೆಲ್ಲ ಬಲಿ ಬೀಳುವವರಲ್ಲ ಎಂದರು.

ADVERTISEMENT

ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಮಾತನಾಡಿ, ‘ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಅಂತ ಸುಳ್ಳು ವದಂತಿಗಳು ಹರಡುತ್ತಿವೆ. ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ನನಗೆ ಗೆಲ್ಲುವ ವಿಶ್ವಾಸ ಇದೆ’
ಎಂದರು.

ಉಸ್ತುವಾರಿಗಳ ನೇಮಕ: ವಿವಿಧ ಕ್ಷೇತ್ರಗಳಿಗೆ ಪಕ್ಷದ ಉಸ್ತುವಾರಿಗಳನ್ನು ನೇಮಿಸಿರುವುದನ್ನು ಅಧ್ಯಕ್ಷರು ಪ್ರಕಟಿಸಿದರು.

ಹುಣಸೂರು - ಪ್ರಜ್ವಲ್ ರೇವಣ್ಣ, ಸಾರಾ ಮಹೇಶ್,ಕೆ.ಆರ್ ಪೇಟೆ - ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ,ಕೆ.ಆರ್.ಪುರ- ಕುಪೇಂದ್ರ ರೆಡ್ಡಿ,ಕಾಗವಾಡ, ಅಥಣಿ, ಗೋಕಾಕ್ - ಬಂಡೆಪ್ಪ ಕಾಶೆಂಪೂರ್, ಬಸವರಾಜ್ ಹೊರಟ್ಟಿ,ರಾಣೇಬೆನ್ನೂರು- ಎನ್‌.ಎಚ್‌.ಕೋನರೆಡ್ಡಿ, ತಿಪ್ಪೇಸ್ವಾಮಿ, ಯಶವಂತಪುರ - ಮಂಜುನಾಥ್, ಸತ್ಯನಾರಾಯಣ, ಚಿಕ್ಕಬಳ್ಳಾಪುರ- ಕೃಷ್ಣಾರೆಡ್ಡಿ, ಕೆ.ಪಿ ಬಚ್ಚೇಗೌಡ, ಶಿವಾಜಿನಗರ -ಟಿ.ಎ.ಶರವಣ, ಜಫ್ರಿಲ್ಲಾ ಖಾನ್.

ಕಾಂಗ್ರೆಸ್ -ಜೆಡಿಎಸ್‌ನಿಂದ ಉಚ್ಚಾಟನೆ

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್, ಜೆಡಿಎಸ್‌ನ ತಲಾ ಮೂವರು ಬಿಬಿಎಂಪಿ ಸದಸ್ಯರನ್ನು ಉಚ್ಚಾಟಿಸಲಾಗಿದೆ.

ಕಾಂಗ್ರೆಸ್: ಕೆ.ಆರ್.ಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಸವನಪುರ ವಾರ್ಡ್ ಸದಸ್ಯ ಜಯಪ್ರಕಾಶ್, ದೇವಸಂದ್ರ ವಾರ್ಡ್‌ನ ಶ್ರೀಕಾಂತ್, ಎ.ನಾರಾಯಣಪುರದ ಸುರೇಶ್, ವಿಜ್ಞಾನ ನಗರ ವಾರ್ಡ್‌ನ ಎಚ್.ಜಿ.ನಾಗರಾಜ್ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ. ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಜೆಡಿಎಸ್‌ ಸದಸ್ಯರ ಉಚ್ಚಾಟನೆ: ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್‌ ಪಾಲಿಕೆ ಸದಸ್ಯರಾದ ಹೇಮಲತಾ, ಮಹಾದೇವ ಮತ್ತು ಜಯರಾಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ’ ಎಂದು ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

‘ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯರ್ತರನ್ನು ಸೆಳೆಯಲು ಬಿಜೆಪಿ ಪರವಾಗಿ ಬಸವೇಶ್ವರ ನಗರ ಠಾಣೆ ಇನ್‌ಸ್ಪೆಕ್ಟರ್‌ ಸೋಮಶೇಖರ್ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.