ADVERTISEMENT

ಕಾರ್ಯಕರ್ತರ ಸಿಟ್ಟು: ಸಭೆಯಿಂದ ಹೊರನಡೆದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 19:37 IST
Last Updated 9 ಏಪ್ರಿಲ್ 2022, 19:37 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿ ಕನಕಪುರದ ಜೆಡಿಎಸ್ ಕಾರ್ಯಕರ್ತರು ಪಕ್ಷದ ಶಾಸಕಾಂಗ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಶನಿವಾರ ನಡೆದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದಂತೆ ಎದ್ದು ನಿಂತ ಕಾರ್ಯಕರ್ತರು, ‘ಕನಕಪುರದಲ್ಲಿ ಪಕ್ಷದ ಸಂಘಟನೆಗೆ ನೀವು ಒತ್ತು ನೀಡುವುದಿಲ್ಲ. ಅಲ್ಲಿ ನಮ್ಮನ್ನು ಕೇಳುವವರೇ ಇಲ್ಲ. ಪಕ್ಷದ ವಿಚಾರವಾಗಿ ಠಾಣೆಗೆ ಹೋದರೂ ಈವರೆಗೆ ಯಾರೂ ಬಂದಿಲ್ಲ’ ಎಂದು ಸಿಟ್ಟು ಹೊರ ಹಾಕಿದರು.

‘ಕ್ಷೇತ್ರದಲ್ಲಿ 30 ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೊನೆಕ್ಷಣದಲ್ಲಿ ಚುನಾವಣೆ ನಡೆಸುವುದಿಲ್ಲ. ಡಿ.ಕೆ. ಸಹೋದರರ ವಿರುದ್ಧ ನಿಲ್ಲಲು ಆಗುತ್ತಿಲ್ಲ. ಈ ಬಾರಿ ನಿಮ್ಮ ನಿಲುವು ಏನೆಂದು ಸ್ಪಷ್ಟಪಡಿಸಿ. ಇಲ್ಲವಾದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ’ ಎಂದು ರೊಚ್ಚಿಗೆದ್ದರು.

ADVERTISEMENT

ಅವರನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಕುಮಾರಸ್ವಾಮಿ ಸಭೆಯಿಂದ ಹೊರನಡೆದರು. ಅದಾದ ಬಳಿಕ ಕಾರ್ಯಕರ್ತರು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು.

ಪಕ್ಷ ಸಂಘಟನೆ: ಬಳಿಕ ತೋಟದ ಮತ್ತೊಂದು ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ‘ದೇವೇಗೌಡರ ಕಾಲದಿಂದಲೂ ನೀವು ನನ್ನನ್ನು ಬೆಂಬಲಿಸುತ್ತಿದ್ದೀರಿ. ನಾನು ಅಲ್ಲಿಯೇ ಬೆಳೆದ ಕುಡಿ. ನನ್ನನ್ನು ಚಿವುಟುವ ಪ್ರಯತ್ನ ಮಾಡಬೇಡಿ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರೊಂದಿಗೆ ಕೈಜೋಡಿಸಿ ತಪ್ಪು ಮಾಡಿದ್ದು ನಿಜ. ಆದರೆ, ಮುಂದೆಂದೂ ಇಂತಹ ಪ್ರಯತ್ನ ಆಗುವುದಿಲ್ಲ. ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.

‘ಕನಕಪುರದಲ್ಲಿ ಸದ್ಯದಲ್ಲೇ ಪಕ್ಷದ ಕಚೇರಿ ತೆರೆದು ಸಿಬ್ಬಂದಿಯೊಬ್ಬರನ್ನು ನೇಮಿಸಲಾಗುವುದು. ಕಾರ್ಯಕರ್ತರು ಏನೇ ಅಹವಾಲು ಇದ್ದರೂ ಅಲ್ಲಿಗೆ ಸಲ್ಲಿಸಬಹುದು. ಮುಂದಿನ ಚುನಾವಣೆಗೆ ಕಾರ್ಯಕರ್ತರ ಅಭಿಪ್ರಾಯ ಪಡೆದೇ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಪಲಾಯನ ಮಾಡುವುದಿಲ್ಲ. ಇಂದಿನಿಂದಲೇ ಹೊಸ ರಾಜಕಾರಣ ಶುರು ಮಾಡೋಣ’ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.