ADVERTISEMENT

ಜೆಡಿಎಸ್‌ನಿಂದ ‘ಜನತಾ ಜಲಧಾರೆ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 19:32 IST
Last Updated 9 ನವೆಂಬರ್ 2021, 19:32 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ರಾಜ್ಯದಲ್ಲಿರುವ 38 ನದಿಗಳ ನೀರಿನ ಸಂಗ್ರಹ ಮತ್ತು ಸಮರ್ಪಕ ಬಳಕೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಪಕ್ಷದಿಂದ ‘ಜನತಾ ಜಲಧಾರೆ’ ಅಭಿಯಾನ ನಡೆಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್‌ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ನಡೆಯುತ್ತಿರುವ ‘ಜನತಾ ಸಂಗಮ’ದಲ್ಲಿ ಪಾಲ್ಗೊಳ್ಳುವ ಮುನ್ನ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನೀರಾವರಿ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತವನ್ನು ರಕ್ಷಿಸುವುದಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಕಳುಹಿಸಿರುವ ಮನವಿಗಳಿಗೆ ಕೇಂದ್ರ ಸರ್ಕಾರದ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಈ ಎಲ್ಲ ವಿಷಯಗಳನ್ನೂ ಅಭಿಯಾನದ ಮೂಲಕ ರಾಜ್ಯದ ಜನರ ಮುಂದಿಡುತ್ತೇವೆ’ ಎಂದರು.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷವು ಪಾದಯಾತ್ರೆ ನಡೆಸಲು ತೀರ್ಮಾನಿಸಿರುವುದನ್ನು ತಾವು ಟೀಕಿಸುವುದಿಲ್ಲ. ಕಾಂಗ್ರೆಸ್‌ ನಾಯಕರು ಪಕ್ಷ ಸಂಘಟನೆಗಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೋ ಎಂಬುದು ಗೊತ್ತಿಲ್ಲ. ಜೆಡಿಎಸ್‌ ಬದ್ಧತೆಯಿಂದ ಕೆಲಸ ಮಾಡುವ ಪಕ್ಷ. ಕಾಂಗ್ರೆಸ್‌ನ ವೇಗ ತಮ್ಮ ಪಕ್ಷಕ್ಕೆ ಬೇಡ. ಯಾವುದೇ ವಿಚಾರದಲ್ಲೂ ಗಿಮಿಕ್‌ ಮಾಡುವುದಿಲ್ಲ ಎಂದು ಹೇಳಿದರು.

ADVERTISEMENT

ಹೃದಯ ವೈಶಾಲ್ಯತೆ ಮೆರೆಯಲಿ: ಕರ್ನಾಟಕದ ನೀರಾವರಿ ವಿಚಾರಗಳ ಕುರಿತು ನೆರೆಯ ರಾಜ್ಯಗಳು ತಗಾದೆ ತೆಗೆಯುತ್ತಿವೆ. ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ವಿವಾದ ಸೃಷ್ಟಿಸುತ್ತಿವೆ. ನೆರೆಯ ರಾಜ್ಯಗಳ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಈ ವಿಷಯವನ್ನು ಅರ್ಥ ಮಾಡಿಕೊಂಡು ನೀರಾವರಿ ಯೋಜನೆಗಳ ವಿಷಯದಲ್ಲಿ ಹೃದಯ ವೈಶಾಲ್ಯತೆ ಪ್ರದರ್ಶಿಸಬೇಕು ಎಂದರು.

‘ಪಕ್ಷದ ಪ್ರಮುಖರ ಸಮಿತಿಯನ್ನು ಶೀಘ್ರದಲ್ಲಿ ರಚಿಸಲಾಗುವುದು. ಸಮಿತಿಯಲ್ಲಿ ಯಾರೆಲ್ಲ ಇರಬೇಕು ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿಯುತ್ತಿರುವವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್‌ ವಕ್ತಾರ ಟಿ.ಎ. ಶರವಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.