ADVERTISEMENT

ಜೆಡಿಎಸ್‌ನಿಂದ ‘ಸಾಕಪ್ಪಾ ಸಾಕು ಕಾಂಗ್ರೆಸ್‌’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:23 IST
Last Updated 11 ಏಪ್ರಿಲ್ 2025, 15:23 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಜೆಡಿಎಸ್‌, ‘ಸಾಕಪ್ಪಾ ಸಾಕು ಕಾಂಗ್ರೆಸ್‌’ ಅಭಿಯಾನಕ್ಕೆ ಚಾಲನೆ ನೀಡಿದೆ. ‘ಕಾಂಗ್ರೆಸ್‌ ಸರ್ಕಾರದ ಬೆಲೆಏರಿಕೆ ನೀತಿಯ ವಿರುದ್ಧ ಜನರಿಗೆ ದನಿಯಾಗಲು ಈ ಅಭಿಯಾನ ಆರಂಭಿಸಲಾಗಿದೆ’ ಎಂದು ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ನಮ್ಮ ಹೋರಾಟವಲ್ಲ. ಬದಲಿಗೆ ರಾಜ್ಯ ಸರ್ಕಾರದ ವಿರುದ್ಧ ಜನರ ಹೋರಾಟ. ಬೆಲೆ ಏರಿಕೆ ಮತ್ತು ಕಾಂಗ್ರೆಸ್‌ ಸರ್ಕಾರದ ಹುನ್ನಾರಗಳ ವಿರುದ್ಧ ಜನರನ್ನು ಒಗ್ಗೂಡಿಸಲು ಸಾಕಪ್ಪಾಸಾಕು ಜಾಲತಾಣವನ್ನು (https://www.saakappasaaku.com) ಆರಂಭಿಸಿದ್ದೇವೆ. ಈ ಜಾಲತಾಣದಲ್ಲಿ ಯಾರು ಬೇಕಾದರೂ ನೋಂದಣಿ ಮಾಡಿಕೊಂಡು, ಪ್ರತಿಭಟನೆಯಲ್ಲಿ ಭಾಗಿಯಾಗಬಹುದು’ ಎಂದರು.

‘ಸರ್ಕಾರವು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ದಿದೆ. ಆರ್ಥಿಕ ತುರ್ತು ಸ್ಥಿತಿ ಸೃಷ್ಟಿಯಾಗಿದೆ. ಜನರು ರೋಸಿ ಹೋಗಿದ್ದಾರೆ. ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ಜನರು ಸಾಕಪ್ಪಾ ಸಾಕು ಎನ್ನುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಾವೂ ಹೋರಾಟಕ್ಕೆ ಧುಮುಕಿದ್ದೇವೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆಯನ್ನು ಶನಿವಾರ ಹಮ್ಮಿಕೊಂಡಿದ್ದೇವೆ. 10,000ಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. ಅಲ್ಲಿಂದ ‘ವಿಧಾನಸೌಧ ಚಲೋ’ ನಡೆಸುತ್ತೇವೆ’ ಎಂದರು.

ADVERTISEMENT

‘ರಾಯರಡ್ಡಿಯವರಿಗೆ ಅಭಿನಂದನೆ’: ಕಾಂಗ್ರೆಸ್ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಅದೇ ಪಕ್ಷದ ಬಸವರಾಜ ರಾಯರಡ್ಡಿ ಮಾತನಾಡಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜ್ಯವೇ ನಂಬರ್‌ ಒನ್‌ ಎಂದಿದ್ದಾರೆ. ಸತ್ಯವನ್ನು ಹೇಳಿರುವ ಅವರಿಗೆ ಅಭಿನಂದನೆಗಳು. ಬಿಜೆಪಿ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಯಾವುದೇ ಮಿತಿ ಇಲ್ಲದೆ ಕಮಿಷನ್‌ ಕೀಳುತ್ತಿದೆ’ ಎಂದು ನಿಖಿಲ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.