ADVERTISEMENT

ಮನೆ ಬಾಗಿಲಿಗೆ ಬರಲಿವೆ ರಾಷ್ಟ್ರೀಯ ಪಕ್ಷಗಳು; ಎಚ್‌.ಡಿ. ದೇವೇಗೌಡ ಹೇಳಿಕೆ

ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:43 IST
Last Updated 16 ಸೆಪ್ಟೆಂಬರ್ 2021, 16:43 IST
ಜೆಡಿಎಸ್‌ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರೊಂದಿಗೆ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಚರ್ಚಿಸುತ್ತಿರುವುದು. ಪಕ್ಷದ ಮುಖಂಡ ನಾರಾಯಣಸ್ವಾಮಿ ಇದ್ದರು– ಪ್ರಜಾವಾಣಿ ಚಿತ್ರ
ಜೆಡಿಎಸ್‌ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರೊಂದಿಗೆ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಚರ್ಚಿಸುತ್ತಿರುವುದು. ಪಕ್ಷದ ಮುಖಂಡ ನಾರಾಯಣಸ್ವಾಮಿ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ ಅನಿವಾರ್ಯವಾಗಲಿದೆ. 2023ರ ವಿಧಾನಸಭಾ ಚುನಾವಣೆ ಬಳಿಕ ಎರಡೂ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರುವುದು ನಿಶ್ಚಿತ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘2023ರ ಚುನಾವಣೆವರೆಗೂ ಈ ರೀತಿ ಪಕ್ಷ ಸಂಘಟನೆ ಮಾಡುತ್ತೇನೆ. ಜನರ ಬಳಿ ಹೋಗಿ ಎಲ್ಲವನ್ನೂ ಹೇಳುತ್ತೇನೆ’ ಎಂದರು.

‘ನಾನು ಬಿಜೆಪಿಯವನಲ್ಲ. ಆದರೆ, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಲು ಹೊರಟಿದ್ದವರೇ ನಮ್ಮನ್ನು ಬಿಜೆಪಿಯ ‘ಬಿ ಟೀಂ’ ಎಂದು ಆರೋಪಿಸಿದರು. ರಾಹುಲ್‌ ಗಾಂಧಿ ಕೂಡ ಹಾಸನದಲ್ಲಿ ಅದೇ ಮಾತನಾಡಿದರು. ಯಾರೋ ಹೇಳಿಕೊಟ್ಟಿದ್ದನ್ನೇ ಅವರು ಮಾಧ್ಯಮಗಳ ಎದುರು ಹೇಳಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಮೀರ್‌ ಅಹಮ್ಮದ್‌ ಜೆಡಿಎಸ್‌ ಶಾಸಕರನ್ನು ಬಿಜೆಪಿ ಜತೆ ಕರೆದುಕೊಂಡು ಹೋದವರು. ಅವರು ಸಿದ್ದರಾಮಯ್ಯ ಅವರಿಗೆ ಸ್ವಚ್ಛವಾಗಿ ಕಾಣುತ್ತಾರೆ. 150 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸುತ್ತದೆ ಎಂದು ಹೇಳುತ್ತಾರೆ. ಆದರೆ, ತಮಿಳುನಾಡು, ದೆಹಲಿ, ಒಡಿಶಾದಲ್ಲಿ ಕಾಂಗ್ರೆಸ್‌ ಪಕ್ಷದ ಕತೆ ಏನಾಗಿದೆ ನೋಡಲಿ ಎಂದರು.

ಕಲಬುರ್ಗಿ ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಬೆಂಬಲ ನೀಡುವ ಕುರಿತು ಕೇಳಿದಾಗ, ‘ಆ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.