ADVERTISEMENT

ಯಾರ ಜತೆಗೂ ಮೈತ್ರಿ ಇಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:30 IST
Last Updated 4 ಜನವರಿ 2021, 19:30 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: 'ಮುಂಬರುವ ಚುನಾವಣೆಗಳಲ್ಲಿ ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿಯೇ ಚುನಾವಣೆ ಎದುರಿಸಲಿದೆ" ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ಸೋಮವಾರ ನಡೆದ ಯುವ ಜನತಾದಳ ಮತ್ತು ವಿದ್ಯಾರ್ಥಿ ಜನತಾ ದಳಗಳ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸಭೆಗೂ ಮೊದಲು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಏನು ಎಂಬುದು ನಮಗೆ ಗೊತ್ತಿದೆ. ಇಬ್ಬರ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದರು.

‘ಜೆಡಿಎಸ್‌ ಅಸ್ತಿತ್ವವೇ ಮುಗಿದುಹೋಯಿತು ಎಂದು ಬಿಜೆಪಿ, ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿವೆ. ಎರಡೂ ಪಕ್ಷಗಳ ನಾಯಕರು ಜೆಡಿಎಸ್‌ ಅನ್ನು ಮುಗಿಸಲು ಯತ್ನಿಸುತ್ತಿವೆ. ಆದರೆ, ಯಾರಿಗೂ ನಮ್ಮನ್ನು ಮುಗಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ ಬೆಂಬಲದಿಂದಲೇ ಜೆಡಿಎಸ್‌ನವರು ಪ್ರಧಾನಿ, ಮುಖ್ಯಮಂತ್ರಿ ಆಗಿದ್ದು’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಯಾವತ್ತೂ ಅವರ ಮನೆ ಬಾಗಿಲಿಗೆ ಹೋಗಿಲ್ಲ. ದೇವೇಗೌಡರು ರಾಜ್ಯ ಬಿಟ್ಟು ದೆಹಲಿಗೆ ಹೋಗುವುದಿಲ್ಲ ಎಂದಿದ್ದರು. ಆಗಲೂ ಕಾಂಗ್ರೆಸ್‌ನವರು ಬಂದು ಗೋಗರೆದಿದ್ದರು. ಕಳೆದ ಬಾರಿಯೂ ನಮ್ಮ ಮನೆ ಬಾಗಿಲಿಗೆ ಬಂದು ಮುಖ್ಯಮಂತ್ರಿ ಆಗುವಂತೆ ಹೇಳಿದವರು ಅವರೇ’ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ತಾವು ಯಾವತ್ತೂ ಭೇಟಿ ಮಾಡಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮಾತ್ರ ಭೇಟಿ ಮಾಡಿರುವುದು ನಿಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷ ಸಂಘಟನೆಯಲ್ಲಿ ಬದಲಾವಣೆ: ಸಂಕ್ರಾಂತಿ ಬಳಿಕ ಪಕ್ಷ ಸಂಘಟನೆಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಲಾಗುವುದು. ತಳ ಹಂತದಿಂದಲೂ ಪಕ್ಷ ಸಂಘಟನೆ ಮಾಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

‘ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನ ಗೆದ್ದಿರುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಹೇಳಿಕೊಳ್ಳುತ್ತಿವೆ. ನಾವು ಹಾಗೆ ಹೇಳುವುದಿಲ್ಲ. ಬಿಜೆಪಿಯವರು ಹಣ ಬಲದಿಂದಲೇ ಪಂಚಾಯಿತಿ ಚುನಾವಣೆ ಮಾಡಿದ್ದಾರೆ. ಈ ಬಗ್ಗೆ ಅವರ ಪಕ್ಷದ ಶಾಸಕರಿಗೂ ಅಸಮಾಧಾನವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.