ADVERTISEMENT

ಉಪ ಸಭಾಪತಿ ಸ್ಥಾನಕ್ಕೆ ಜೆಡಿಎಸ್‌ ಸ್ಪರ್ಧೆ ಇಲ್ಲ

ಹೊರಟ್ಟಿಗೆ ಸಭಾಪತಿ ಹುದ್ದೆ ನೀಡಲು ಸಹಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 18:13 IST
Last Updated 26 ಜನವರಿ 2021, 18:13 IST
ಜೆಡಿಎಸ್‌ ಚಿಹ್ನೆ
ಜೆಡಿಎಸ್‌ ಚಿಹ್ನೆ    

ಬೆಂಗಳೂರು: ಜನವರಿ 29ರಂದು ನಡೆಯುವ ವಿಧಾನ ಪರಿಷತ್‌ ಉಪ ಸಭಾಪತಿ ಆಯ್ಕೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಜೆಡಿಎಸ್‌ ತೀರ್ಮಾನಿಸಿದೆ. ಸಭಾಪತಿ ಹುದ್ದೆ ಪಡೆಯುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

ಸಭಾಪತಿ ಮತ್ತು ಉಪ ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಸುದೀರ್ಘ ಕಾಲ ಸಭೆ ನಡೆಯಿತು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಎಸ್‌.ಎಲ್‌. ಭೋಜೇಗೌಡ, ಅಪ್ಪಾಜಿಗೌಡ, ಕಾಂತರಾಜ್, ಗೋವಿಂದರಾಜ್‌, ರಮೇಶ್ ಗೌಡ ಮತ್ತು ತಿಪ್ಪೇಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭಾಪತಿ ಸ್ಥಾನವನ್ನು ಪಡೆಯುವ ಕುರಿತು ದೇವೇಗೌಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಹೊರಟ್ಟಿ ಅವರನ್ನು ಸಭಾಪತಿ ಹುದ್ದೆಗೆ ಆಯ್ಕೆಮಾಡುವ ಪ್ರಸ್ತಾವವನ್ನೂ ಸಭೆಯ ಮುಂದಿಟ್ಟರು. ಎಲ್ಲ ಸದಸ್ಯರೂ ಸಹಮತ ಸೂಚಿಸಿದ್ದು, ಉಪ ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಹೊರಟ್ಟಿ, ‘ನನ್ನನ್ನು ಸಭಾಪತಿ ಮಾಡಬೇಕೆಂಬುದು ಸಭೆಯಲ್ಲಿ ತೀರ್ಮಾನವಾಗಿದೆ. ಈ ಕುರಿತು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜತೆ ಚರ್ಚಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯ ಘಟಕಕ್ಕೆ ನಿರ್ದೇಶನವನ್ನೂ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.