ADVERTISEMENT

ಬಳಕೆ ಪ್ರಮಾಣಪತ್ರ ಸಲ್ಲಿಸಿದರಷ್ಟೇ ಕರ್ನಾಟಕಕ್ಕೆ JJM ಅನುದಾನ: ಸಿ.ಆರ್. ಪಾಟೀಲ

ಜಲ ಜೀವನ್‌ ಮಿಷನ್‌: ಜಲಶಕ್ತಿ ಸಚಿವ ಸಿ.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 13:48 IST
Last Updated 11 ಡಿಸೆಂಬರ್ 2025, 13:48 IST
ಸಿ.ಆರ್.ಪಾಟೀಲ 
ಸಿ.ಆರ್.ಪಾಟೀಲ    

ನವದೆಹಲಿ: ಅನುದಾನ ಬಳಕೆಯ ಪ್ರಮಾಣಪತ್ರ ಸಲ್ಲಿಸಿದರಷ್ಟೇ ಜಲ ಜೀವನ್‌ ಮಿಷನ್‌ನ ಉಳಿದ ಅನುದಾನವನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಸ್ಪಷ್ಟಪಡಿಸಿದರು. 

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಂ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ಈಗಾಗಲೇ ಬಿಡುಗಡೆ ಆಗಿರುವ ಅನುದಾನದ ಬಳಕೆ ಪ್ರಮಾಣಪತ್ರವನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಸಲ್ಲಿಸಿಲ್ಲ. ಬಳಕೆ ಪ್ರಮಾಣಪತ್ರ ಸಲ್ಲಿಸದೇ ಉಳಿದ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇವೆ‘ ಎಂದರು. 

ಜಲ ಜೀವನ್‌ ಮಿಷನ್‌ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ವಾರ ಇನ್ನೊಂದು ಸಭೆ ನಡೆಯಲಿದೆ ಎಂದರು. 

ADVERTISEMENT

ಇ.ತುಕಾರಾಂ ಮಾತನಾಡಿ, ‘ಈ ಯೋಜನೆಯಲ್ಲಿ ರಾಜ್ಯ ಅದ್ಭುತ ಸಾಧನೆ ಮಾಡಿದೆ. ಆದರೆ, ಕೇಂದ್ರ ಸರ್ಕಾರವು ₹13,500 ಕೋಟಿಯಷ್ಟು ಅನುದಾನ ಉಳಿಸಿಕೊಂಡಿದೆ. ಈ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು. 

ಈ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ ₹36,357 ಕೋಟಿ ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರವು ತನ್ನ ‍ಪಾಲು ₹16,360 ಕೋಟಿ ಬಿಡುಗಡೆ ಮಾಡಬೇಕಿತ್ತು. ಆದರೆ, ಈ ವರೆಗೆ ಬಿಡುಗಡೆ ಮಾಡಿರುವುದು ₹11,786 ಕೋಟಿ ಮಾತ್ರ. ಇದರಿಂದ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂಬುದು ರಾಜ್ಯ ಸರ್ಕಾರದ ಆರೋಪ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.