ADVERTISEMENT

ಜ್ಞಾನಭಾರತಿ: ಮರಗಳ ಕತ್ತರಿಸಲು ನಿರ್ಬಂಧ

ಎರಡು ಪಿಐಎಲ್ ವಿಚಾರಣೆ ನಡೆಸಿದ ಸಿಜೆ ವಿಭು ಬಖ್ರು ನೇತೃತ್ವದ ಪೀಠದಿಂದ ಆದೇಶ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2025, 16:19 IST
Last Updated 29 ನವೆಂಬರ್ 2025, 16:19 IST
‘ಲಹರಿ ಅಡ್ವೊಕೇಟ್ಸ್‌ ಫೋರಂ’ ವತಿಯಿಂದ ಹೈಕೋರ್ಟ್‌ನ ಮುಖ್ಯ ಸಂರಕ್ಷಕ ಹಾಲ್‌ನಲ್ಲಿ ನಡೆದ ಚೆಂಗಪ್ಪ ಸ್ಮರಣಾರ್ಥದ 18ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಫೋರಂನ ಕಾರ್ಯದರ್ಶಿಯೂ ಆದ ಹೈಕೋರ್ಟ್‌ ವಕೀಲೆ ಎಂ.ಸುಮನಾ ಬಾಳಿಗಾ, ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಫೋರಂ ಅಧ್ಯಕ್ಷ ಎಚ್.ಜೆ.ಸಾಂಘ್ವಿ ಇದ್ದರು.  
‘ಲಹರಿ ಅಡ್ವೊಕೇಟ್ಸ್‌ ಫೋರಂ’ ವತಿಯಿಂದ ಹೈಕೋರ್ಟ್‌ನ ಮುಖ್ಯ ಸಂರಕ್ಷಕ ಹಾಲ್‌ನಲ್ಲಿ ನಡೆದ ಚೆಂಗಪ್ಪ ಸ್ಮರಣಾರ್ಥದ 18ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಫೋರಂನ ಕಾರ್ಯದರ್ಶಿಯೂ ಆದ ಹೈಕೋರ್ಟ್‌ ವಕೀಲೆ ಎಂ.ಸುಮನಾ ಬಾಳಿಗಾ, ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಫೋರಂ ಅಧ್ಯಕ್ಷ ಎಚ್.ಜೆ.ಸಾಂಘ್ವಿ ಇದ್ದರು.     

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಆವರಣದಲ್ಲಿರುವ ಬಯೋ ಪಾರ್ಕ್‌ನಲ್ಲಿ ಸದ್ಯ ಯಾವುದೇ ಮರಗಳನ್ನು ಕತ್ತರಿಸಬಾರದು’ ಎಂದು ನಿರ್ಬಂಧಿಸಿ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ಈ ಸಂಬಂಧ, ‘ಸ್ವಯಂ ಜಾಗೃತಿ ಸೇವಾ ಟ್ರಸ್ಟ್’ ಅಧ್ಯಕ್ಷ ಸಿ.ಅಜಯ್ ಕುಮಾರ್ ಹಾಗೂ ಕೋರಮಂಗಲದ ಪಾರ್ವತಿ ಶ್ರೀರಾಮ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಕ್ಯಾಂಪಸ್‌ ಆವರಣದಲ್ಲಿನ ವಿವಿಧ ಸಂಸ್ಥೆಗಳಿಗೆ ನೀಡಿರುವ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಹಾಗೂ ಇನ್ನಿತರ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ ಎಷ್ಟು ಮರಗಳನ್ನು ಕತ್ತರಿಸಲಾಗಿದೆ ಹಾಗೂ ಎಷ್ಟು ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂಬುದರ ಸಮಗ್ರ ವರದಿ ಸಲ್ಲಿಸಿ’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ನ್ಯಾಯಾಲಯದಲ್ಲಿ ಅರ್ಜಿ ಬಾಕಿ ಇರುವಾಗಲೇ, ಕೆಲವು ಮರಗಳನ್ನು ಕತ್ತರಿಸಲಾಗಿದೆ, ಇನ್ನೂ ಕೆಲವು ಮರಗಳನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ. ಪ್ರತಿವಾದಿಗಳು 350 ಮರಗಳನ್ನು ಕತ್ತರಿಸುವ ಬಗ್ಗೆ ಸಾರ್ವಜನಿಕ ನೋಟಿಸ್‌ ಅನ್ನೂ ಹೊರಡಿಸಿದ್ದಾರೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

‘ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿನ ಜಾಗವನ್ನು ಯುಜಿಸಿ, ಕರ್ನಾಟಕ ಸೆಂಟ್ರಲ್‌ ಯೂನಿವರ್ಸಿಟಿ, ನ್ಯಾಕ್‌ ಮಂಡಳಿ, ವಿಟಿಯು ಮತ್ತಿತರ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಮುಂದಾಗಿದ್ದು, ಅದಕ್ಕೆ ನಿರ್ಬಂಧ ವಿಧಿಸಬೇಕು’ ಎಂದೂ ಕೋರಿದರು.

ಇದಕ್ಕೆ ನ್ಯಾಯಪೀಠ, ‘ಈಗಾಗಲೇ ಕತ್ತರಿಸಿರುವ ಮತ್ತು ಸ್ಥಳಾಂತರ ಮಾಡಿರುವ ಮರಗಳಿಗಾಗಿ ಏನೂ ಮಾಡಲಾಗದು. ಆದರೆ, ಸದ್ಯಕ್ಕೆ ಹೊಸದಾಗಿ ಯಾವುದೇ ಮರಗಳನ್ನು ಕತ್ತರಿಸಬಾರದು’ ಎಂದು ಬೆಂಗಳೂರು ವಿಶ್ವವಿದ್ಯಾಲಯ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ರಾಜ್ಯ ಸರ್ಕಾರ, ಎನ್‌ಎಲ್‌ಎಸ್‌ಯುಐ ಸೇರಿದಂತೆ ಎಲ್ಲಾ 40 ಪ್ರತಿವಾದಿಗಳಿಗೆ ನಿರ್ದೇಶಿಸಿತು.

‘ಪಿಎಂ-ಉಷಾ ಯೋಜನೆ (ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ), ಅಂಬೇಡ್ಕರ್ ಥೀಮ್ ಪಾರ್ಕ್, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಹೊಸ ಕ್ಯಾಂಪಸ್ ಸೇರಿದಂತೆ ಹಲವು ನಿರ್ಮಾಣ ಯೋಜನೆಗಳ ಜಾರಿಗಾಗಿ ಜ್ಞಾನಭಾರತಿ ಕ್ಯಾಂಪಸ್‌ನ ನೂರಾರು ಮರಗಳನ್ನು ಕಡಿಯುವ ಪ್ರಸ್ತಾವ ಆತಂಕಕಾರಿಯಾಗಿದೆ’ ಎಂದು ದೂರಿ ಈ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಜ್ಞಾನಭಾರತಿ ಕ್ಯಾಂಪಸ್ ಒಟ್ಟು 1,112 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಇದನ್ನು ನೈಸರ್ಗಿಕ ಭೂಪ್ರದೇಶ ಮತ್ತು ಜೀವವೈಧ್ಯತೆ ಸಂರಕ್ಷಣೆಯ ಶೈಕ್ಷಣಿಕ ಹಾಗೂ ಪರಿಸರ ಕ್ಯಾಂಪಸ್ ಎಂದು ಗುರುತಿಸಲಾಗಿದೆ. ಬಯೋ ಪಾರ್ಕ್‌ನಲ್ಲಿ ಔಷಧೀಯ, ಬಿದಿರು, ಚಿಟ್ಟೆ, ಹಣ್ಣು ಸೇರಿದಂತೆ ವಿವಿಧ 16 ಬಗೆಯ ವಲಯಗಳಿವೆ. ಇದು ನಗರದಲ್ಲಿ ಉಳಿದಿರುವ ಕೊನೆಯ ಹಸಿರು ಪ್ರದೇಶ ಎನಿಸಿದೆ. ಇದು ಅಮೂಲ್ಯ ಸಸ್ಯವರ್ಗ, ಪ್ರಾಣಿ ಸಂಕುಲ ಮತ್ತು ನೈಸರ್ಗಿಕ ಜಲಮೂಲಗಳನ್ನು ಹೊಂದಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ವಿವಿಧ ನಿರ್ಮಾಣ ಯೋಜನೆಗಳ ಜಾರಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಅರಣ್ಯ ಪ್ರದೇಶ ನಾಶದ ಅಂಚಿಗೆ ಸಿಲುಕಲಿದೆ ಮತ್ತು ಅಲ್ಲಿನ ಜೀವಸಂಕುಲದ ವೈವಿಧ್ಯವನ್ನು ಅಪಾಯಕ್ಕೆ ನೂಕಲಾಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ನಿರ್ದೇಶನ

‘ರೈಲ್ವೆ ಇಲಾಖೆಯು ನಗರದ ಕೆ.ಜಿ.ಹಳ್ಳಿಯ ಸಮೀಪದ ಜಾಗ ತನಗೆ ಸೇರಿದ್ದು ಎಂದು 130 ಜನ ದಲಿತರು ವಾಸಿಸುತ್ತಿದ್ದ ಮನೆಗಳನ್ನು ನೆಲಸಮಗೊಳಿಸಿರುವ ಹಿನ್ನೆಲೆಯಲ್ಲಿ ರೈಲ್ವೆ ಸುಪರ್ದಿಯ ಜಾಗ ಯಾವುದು ಸಂತ್ರಸ್ತರ ಜಾಗ ಯಾವುದು ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ (ಎಡಿಎಲ್‌ಆರ್‌) ನಿರ್ದೇಶಿಸಿದೆ.

‘ಸದ್ಯ ಸಂತ್ರಸ್ತರಾಗಿರುವ 29 ಕುಟುಂಬಗಳಿಗೆ ಸ್ಥಳೀಯ ಲಿಡ್ಕರ್‌ ಭವನದಲ್ಲಿ ಕಲ್ಪಿಸಲಾಗಿರುವ ತಾತ್ಕಾಲಿಕ ವಸತಿ ಸೌಕರ್ಯವನ್ನು 2026ರ ಜನವರಿ 15ವರೆಗೂ ಮುಂದುವರಿಸಬೇಕು’ ಎಂದೂ ನ್ಯಾಯಪೀಠ ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಸಮಾಜ ಕಲ್ಯಾಣ ಇಲಾಖೆಗೆ ತಾಕೀತು ಮಾಡಿದೆ. ಮನೆ ಕಳೆದುಕೊಂಡಿರುವ ಕೆ.ಜಿ.ಹಳ್ಳಿಯ ಚುನಾ ಲೈನ್ ನಿವಾಸಿಗಳಾದ ಯು.ರಾಣಿ ಸೇರಿದಂತೆ 12 ಮಂದಿ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಜಿ.ಆರ್‌.ಮೋಹನ್‌ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ ‘ರೈಲ್ವೆ ಭೂಮಿ ಯಾವುದು ಅರ್ಜಿದಾರರ ಭೂಮಿ ಯಾವುದು ಎಂಬ ಬಗ್ಗೆ ಡಿಸೆಂಬರ್ 7ರಂದು ಸ್ಥಳ ಪರಿಶೀಲನೆ ನಡೆಸಿ ಡಿಸೆಂಬರ್ 11ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.