ADVERTISEMENT

ಸಮಾಜದ ಬದಲಾವಣೆಗೆ ಶ್ರಮಿಸಿದ ಪತ್ರಕರ್ತ ಪಿ.ರಾಮಯ್ಯ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:31 IST
Last Updated 17 ಫೆಬ್ರುವರಿ 2026, 16:31 IST
   

ಬೆಂಗಳೂರು: ‘ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮಾಧ್ಯಮ ಸಲಹೆಗಾರರಂತಹ ಪ್ರಮುಖ ಹುದ್ದೆ ಅರಸಿ ಬಂದರೂ ಅದನ್ನು ಸುತಾರಾಂ ಒ‍ಪ್ಪದ ಪಿ.ರಾಮಯ್ಯ ಅವರು ಪತ್ರಕರ್ತರಾಗಿ ಮಾತ್ರ ಇರದೇ ಸಮಾಜದ ಪ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪ‍ತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌ಕ್ಲಬ್, ವರದಿಗಾರರ ಕೂಟ ಜಂಟಿಯಾಗಿ ಮಂಗಳವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಪಿ. ರಾಮಯ್ಯ ಅವರಿಗೆ ಶ್ರದ್ಧಾಂಜಲಿ, ‘ನಾನು ಹಿಂದೂ ರಾಮಯ್ಯ’ ಪುಸ್ತಕ ಎರಡನೇ ಮುದ್ರಣದ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

‘ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿಯನ್ನು ಸಮಾಜದ ಬದಲಾವಣೆಯ ಅಸ್ತ್ರ ಎಂದುಕೊಂಡೇ ಅದೇರೀತಿ ಬದುಕಿದರು. ಆದಿಚುಂಚನಗಿರಿ ಮಠದ ಕಷ್ಟದ ಕಾಲದಲ್ಲೂ ಅವರು ಜತೆಗಿದ್ದರು. ಮಠದ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇದೆ’ ಎಂದು ನುಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗಾಂಧಿಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ರಾಮಯ್ಯ ಅವರು ಹಲವು ಶಿಕ್ಷಣ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದರು. ಸರಳ ಭಾಷೆಯಿಂದಲೇ ಅವರು ಬರೆದ ವಿಶೇಷ ವರದಿ, ಲೇಖನಗಳು ಸಮಾಜದಲ್ಲಿ ಬದಲಾವಣೆಗೆ ದಾರಿ ಮಾಡಿಕೊಟ್ಟಿವೆ.ಬೆಂಗಳೂರಿಗೆ ಕಾವೇರಿ ನೀರು ಬರಲು ರಾಮಯ್ಯ ಅವರ ಪಾತ್ರವೂ ಇದೆ’ ಎಂದರು.

ಕೃಷಿ ಸಚಿವ ಎನ್‌.ಚಲುವರಾಮಸ್ವಾಮಿ ಮಾತನಾಡಿ, ‘ರಾಜಕೀಯ ವಿಚಾರವಾಗಿ ಬರೆಯುತ್ತಲೇ ನನ್ನಂತಹ ಹಲವು ರಾಜಕಾರಣಿಗಳಿಗೆ ಅವರು ಮಾರ್ಗದರ್ಶನ ಮಾಡಿದ್ಧಾರೆ. ಹಲವು ಪಾಠವನ್ನು ಅವರಿಂದ ಕಲಿತಿದ್ದೇನೆ ಎಂದು ನುಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮಾತನಾಡಿ, ‘ಮೇಲ್ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಗಂಭೀರತೆ ಮತ್ತು ಮೌಲ್ಯಗಳನ್ನು ತರುವಲ್ಲಿ ರಾಮಯ್ಯ ಶ್ರಮಿಸಿದರು. ತಾವು ತೊಡಗಿಸಿಕೊಂಡಿದ್ದ ಎಲ್ಲಾ ಕ್ಷೇತ್ರಗಳ ಘನತೆ ಹೆಚ್ಚಿಸಿ ಮಾದರಿಗಳನ್ನು ನಮ್ಮೆದುರಿಗೆ ಅವರು ಬಿಟ್ಟು ಹೋಗಿದ್ದಾರೆ. ಈ ಮಾದರಿಗಳನ್ನು ಈಗಿನ ಪತ್ರಕರ್ತರು ಮುಂದುವರೆಸಬೇಕು’ ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್‌, ಪತ್ರಕರ್ತರಾದ ಅರಕೆರೆ ಜಯರಾಂ, ಆಶಾ ಕೃಷ್ಣಸ್ವಾಮಿ ಮಾತನಾಡಿದರು. ರಾಮಯ್ಯ ಅವರ ಪುತ್ರ ಡಾ.ಬಾಲಾಜಿ, ಎಚ್‌.ಬಿ.ದಿನೇಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.