ADVERTISEMENT

ಅಧ್ಯಕ್ಷರ ಜೊತೆ ಸ್ನೇಹಿತರಿಗೆ ಉಚಿತ ವಾಸ್ತವ್ಯ?

ಕಬಿನಿಯಲ್ಲಿ 24 ಸ್ನೇಹಿತರ ಜೊತೆ ತಂಗಿರುವ ಜಂಗಲ್‌ ಲಾಡ್ಜಸ್‌ ಅಧ್ಯಕ್ಷ ಅಪ್ಪಣ್ಣ– ಆರೋಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 21:30 IST
Last Updated 24 ಆಗಸ್ಟ್ 2021, 21:30 IST
ಎಂ.ಅಪ್ಪಣ್ಣ
ಎಂ.ಅಪ್ಪಣ್ಣ   

ಮೈಸೂರು: ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ (ಜೆಎಲ್‌ಆರ್‌) ಅಧ್ಯಕ್ಷ ಎಂ.ಅಪ್ಪಣ್ಣ ಅವರು ತಮ್ಮ ಸ್ನೇಹಿತರು, ಬೆಂಬಲಿಗರು ಹಾಗೂ ರಾಜಕಾರಣಿಗಳಿಗೆ ಸರ್ಕಾರಿ ಸ್ವಾಮ್ಯದ ಲಾಡ್ಜ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಹಣ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಂಗಳವಾರ (ಆ.24) ಕೂಡ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಜೆಎಲ್‌ಆರ್‌ಗೆ ಸೇರಿದ ಕಬಿನಿ ರಿವರ್‌ ಲಾಡ್ಜ್‌ನಲ್ಲಿ 25 ಮಂದಿ ವಾಸ್ತವ್ಯ ಹೂಡಿದ್ದು, ಸಫಾರಿ ಹಾಗೂ ಇನ್ನಿತರ ಸೌಲಭ್ಯ ಪಡೆದುಕೊಂಡಿದ್ದಾರೆ. ಇಷ್ಟು ಮಂದಿಗೆ ಕೊಠಡಿ, ಸಫಾರಿ, ಆಹಾರ ಸೇರಿ ಒಂದು ದಿನಕ್ಕೆ ₹ 2 ಲಕ್ಷಕ್ಕೂ ಅಧಿಕ ಶುಲ್ಕವಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲಾಡ್ಜ್‌ನ ಅಧಿಕಾರಿಯೊಬ್ಬರು, ‘ಮಂಗಳವಾರ ಲಾಡ್ಜ್‌ಗೆ ಬಂದು ಸೌಲಭ್ಯ ಬಳಸಿಕೊಂಡಿದ್ದಾರೆ. ಅಧ್ಯಕ್ಷರ ಕಚೇರಿಯಿಂದಲೇ ಬುಕ್ಕಿಂಗ್‌ ಮಾಡಲಾಗಿದ್ದು, ಇದುವರೆಗೆ ಬಿಲ್‌ ಪಾವತಿಯಾಗಿಲ್ಲ’ ಎಂದರು.

ADVERTISEMENT

ಸ್ನೇಹಿತರ ಜೊತೆ ತಂಗಿರುವ ವಿಷಯವನ್ನು ಬೆಂಗಳೂರಿನ ಜೆಎಲ್‌ಆರ್‌ ಮೂಲಗಳು ಖಚಿತಪಡಿಸಿವೆ.

ಹಿಂದೆಯೂ ಪಾವತಿಸಿಲ್ಲ: ‘ಪರಿಶೀಲನೆ ನೆಪದಲ್ಲಿ ಈ ಹಿಂದೆ ಕೂಡ ಬೆಂಬಲಿಗರೊಂದಿಗೆ ಭೇಟಿ ನೀಡಿ ಸಂಸ್ಥೆಯ ಹಲವು ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಆಗಲೂ ಶುಲ್ಕ ‍ಪಾವತಿಸಿರಲಿಲ್ಲ. ಅದರಿಂದ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಈ ಪ್ರಕರಣದಲ್ಲೂ ಇದುವರೆಗೆ ಹಣ ನೀಡಿಲ್ಲ’ ಎಂದು ಸಂಸ್ಥೆಯ ಮೂಲಗಳು ಹೇಳಿವೆ.

‘ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಕೂಡ ಬಿಲ್‌ ಪಾವತಿಸದೆ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರಿಗೆ ಉಚಿತ: ‘ಕಬಿನಿಯಲ್ಲಿ ಒಂದು ದಿನಕ್ಕೆ ಕನಿಷ್ಠ ಒಬ್ಬ ವ್ಯಕ್ತಿಗೆ ಊಟ, ಸಫಾರಿ ಸೇರಿ ₹ 8 ಸಾವಿರದಿಂದ 15 ಸಾವಿರದವರೆಗೆ ಶುಲ್ಕ ನಿಗದಿಯಾಗಿದೆ. ಜೆಎಲ್‌ಆರ್‌ ಅಧ್ಯಕ್ಷರು ಅಧಿಕೃತ ಕಾರ್ಯಕ್ರಮಗಳಿದ್ದಾಗ ಬಂದು ಉಚಿತವಾಗಿ ವಾಸ್ತವ್ಯ ಮಾಡಬಹುದು. ಅವರ ಕುಟುಂಬ, ಬೆಂಬಲಿಗರು, ರಾಜಕಾರಣಿಗಳಿಗೆ ಉಚಿತ ಅವಕಾಶ ಇಲ್ಲ’ ಎಂದು ಹೆಸರು ಹೇಳಲು ಬಯಸದ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದಿನ ಅರಣ್ಯ ಸಚಿವ ಶಂಕರ್‌ ಅವರ ಬೆಂಬಲಿಗರು ವಾಸ್ತವ್ಯ ಮಾಡಿ ಹಣ ಪಾವತಿಸದೆ ಇದ್ದದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.

ಜೆಎಲ್‌ಆರ್‌ನಿಂದ ರಾಜ್ಯದಲ್ಲಿ 24 ಕಡೆ ರೆಸಾರ್ಟ್‌ ನಡೆಸಲಾಗುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿತ್ತು.

ಲಲಿತಮಹಲ್‌ನಲ್ಲೂ ಉಚಿತ ವಾಸ್ತವ್ಯ:

ಸಚಿವರು, ರಾಜಕೀಯ ವ್ಯಕ್ತಿಗಳು ಮೈಸೂರಿಗೆ ಭೇಟಿ ನೀಡಿದಾಗ ಲಲಿತಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಉಚಿತ ವಾಸ್ತವ್ಯ, ಸಭೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಕುರಿತು ಹೋಟೆಲ್‌ನ ಮ್ಯಾನೇಜರ್‌ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ‘ಈ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವಂತಿಲ್ಲ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.