ADVERTISEMENT

'ನಾಯಕ'ನ ಜೊತೆ ಮೊದಲ ರಾತ್ರಿ ಆಚರಣೆ: ನ್ಯಾ.ಶ್ರೀಶಾನಂದ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 15:28 IST
Last Updated 15 ಜನವರಿ 2025, 15:28 IST
ನ್ಯಾಯಮೂರ್ತಿ ವಿ.ಶ್ರೀಶಾನಂದ
ನ್ಯಾಯಮೂರ್ತಿ ವಿ.ಶ್ರೀಶಾನಂದ   

ಬೆಂಗಳೂರು: ‘ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕನ ಜೊತೆ ಎಂಬ ಆಚರಣೆ ಇಂದಿಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ...’

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಮುಕ್ತ ಕಲಾಪದಲ್ಲಿ ಆಡಿದ್ದಾರೆ ಎನ್ನಲಾದ 1.18 ನಿಮಿಷಗಳ ವಿಡಿಯೋ ಕ್ಲಿಪ್‌ನಲ್ಲಿರುವ ಈ ಹೇಳಿಕೆ ವಿವಿಧೆಡೆ ಸಂಘಟನೆ ಮತ್ತು ಸಮುದಾಯಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಶ್ರೀಶಾನಂದ ಹೇಳಿದ್ದೇನು?: ‘ಹಳೆಯ ಶಿಲಾಯುಗದ ಕಾಲದಲ್ಲಿ ಹೆಣ್ಣು ಮಕ್ಕಳಿಗೋಸ್ಕರ ಕಾದಾಟಗಳು ನಡೆದಿದ್ದು, ಹೆಣಗಳು ಬೀಳುತ್ತಿದ್ದವು. ಯಾರಿಗೆ ಶಕ್ತಿ ಇತ್ತೋ (ಮೈಟ್‌ ಈಸ್‌ ದಿ ರೈಟ್‌) ಅವನು ನಾಯಕನಾಗುತ್ತಿದ್ದ. ಆ ನಾಯಕನಿಗೆ ಆ ಹೆಣ್ಣು ಮಗಳನ್ನು ಒಪ್ಪಿಸಿ, ಉಳಿದವರು ಎರಡು ಅಥವಾ ಮೂರನೆಯವರಾಗಿ ಆ ಹೆಣ್ಣು ಮಗಳನ್ನು ಉಪಯೋಗಿಸಿಕೊಳ್ಳಬೇಕಿತ್ತು. ಈ ದುಷ್ಟ ಆಚರಣೆ ಈಗಲೂ ಸುರಪುರದಲ್ಲಿದೆ ಎಂಬುದು ನಿಮಗೆ ಗೊತ್ತಿರಲಿ’.

ADVERTISEMENT

‘ಯಾರನ್ನು ಬೇಕಾದರೂ ನೀವು ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕನ ಜೊತೆ ಎಂದಿದೆ. ಆಮೇಲೆ ಅಲ್ಲೇ ಇರಬಹುದು ಅಥವಾ ಊರು, ಬೇರೆ ಕಡೆ ಹೋಗಿ ಮದುವೆ ಮಾಡಿಕೊಳ್ಳಬಹುದು’.

'ಏನ್‌ ಸಾರ್‌, ಅದೆಲ್ಲವೂ ಸಾಧ್ಯವಾ ಎಂದರೆ; ಆ ಥರ ಈಗಲೂ ನಡೆಯುತ್ತಿದೆ. ಅದರ ಮೇಲೆ ಬೇಕಾದಷ್ಟು ಚಲನಚಿತ್ರಗಳು ಬಂದಿವೆ. ಬೆತ್ತಲೆ ಸೇವೆಯಂಥ ಸಿನಿಮಾ ಬಂದಿದೆ. ಇನ್ನೊಂದು..., ಮತ್ತೊಂದು ಬಂತು. ಎಲ್ಲವೂ ಆಯ್ತು. ಸರಿ ಹೋಯ್ತ ಎಂದು ನೋಡಿದರೆ ಇನ್ನೂ ಸರಿ ಹೋಗಲಿಲ್ಲ’.

‘ದೇವದಾಸಿಯರು ಎಂದರೆ ಏನು? ಅವರೂ ಅದೇನೇ… ಎಲ್ಲ ಬೇಕಾದಷ್ಟು ಮಾಡಿಕೊಂಡರು. ಅದು ಇರಲಿ. ನಾವು ಆ ವಿಚಾರದ ಮೇಲಿಲ್ಲ...’

ಇದು ವಿಡಿಯೊದಲ್ಲಿರುವ ಮಾತುಗಳು.

ಪ್ರತಿಭಟನೆ: ನ್ಯಾಯಮೂರ್ತಿಗಳ ಈ ಹೇಳಿಕೆಯನ್ನು ಖಂಡಿಸಿ ಇದೇ 13ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ, ‘ಮಹರ್ಷಿ ವಾಲ್ಮೀಕಿ ನಾಯಕ ಸಂಘ’ ಮತ್ತು ‘ಸಾಮೂಹಿಕ ಸಂಘಟನೆಗಳ ಒಕ್ಕೂಟ’ ಸುರಪುರ ಬಂದ್‌ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೋರಿಪಾಳ್ಯ ಹೇಳಿಕೆ: ಶ್ರೀಶಾನಂದ ಅವರು, 2024ರ ಸೆಪ್ಟೆಂಬರ್‌ನಲ್ಲಿ ಮುಕ್ತ ಕಲಾಪದ ವೇಳೆ ಕ್ರಿಮಿನಲ್‌ ಪ್ರಕರಣದ ವಿಚಾರಣೆಯೊಂದರಲ್ಲಿ, ‘ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಏಕೆಂದರೆ, ಅದು ಪಾಕಿಸ್ತಾನದಲ್ಲಿದೆ’ ಎಂದಿದ್ದ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿ ಟೀಕೆಗೆ ಒಳಗಾಗಿತ್ತು. ಇದೇ ರೀತಿ, ಮಹಿಳಾ ವಕೀಲೆಯೊಬ್ಬರಿಗೆ ಮುಕ್ತ ಕಲಾಪದಲ್ಲಿ ಕೀಳು ಅಭಿರುಚಿಯಿಂದ ನೀಡಿದ್ದ ಉದಾಹರಣೆಯ ವಿಡಿಯೊ ಕೂಡ ಟೀಕೆಗೆ ಗುರಿಯಾಗಿತ್ತು.

ಈ ಎರಡೂ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿತ್ತು. ಈ ಬೆಳವಣಿಗೆಯ ಬೆನ್ನಿಗೇ ಶ್ರೀಶಾನಂದ ಅವರು ಮುಕ್ತ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದರು.

ವಿಷಾದದ ಹೇಳಿಕೆ ಏನಿತ್ತು?: ‘ನಾನು ನ್ಯಾಯಮೂರ್ತಿಯಾಗಿ ನಿರ್ದಿಷ್ಟ ವಿಧಾನದಲ್ಲಿ ಕೆಲಸ ಮಾಡಲು ಯಾರೂ ನಿರ್ಬಂಧಿಸಲಾಗದು. ಎರಡು ಮೂರು ದಿನಗಳ ಟ್ರೌಮಾ, ಮಾನಸಿಕ ನೋವು. ಅದು ನನಗೆ ಅಗತ್ಯವೇ? ಅವೆಲ್ಲವೂ ಮುಗಿದ ಅಧ್ಯಾಯ. ಯಾವುದೇ ಹಿನ್ನಡೆಯಲಾಗಿಲ್ಲ. ಮುಕ್ತ ನ್ಯಾಯಾಲಯದಲ್ಲಿ ಕೆಲವು ವಿಚಾರಗಳನ್ನು ಸ್ಪಷ್ಟಪಪಡಿಸುವ ಉದ್ದೇಶವನ್ನು ನಾನು ನಿಲ್ಲಿಸುತ್ತೇನೆ’.

‘ನಾನು ಇಲ್ಲಿ ನ್ಯಾಯಮೂರ್ತಿಯ ಕೆಲಸವನ್ನು ನಿಭಾಯಿಸಬೇಕು. ಅದನ್ನು ಮಾಡುತ್ತೇನೆ. ನಮ್ಮ ಕೆಲವು ಸ್ನೇಹಿತರಿಗೆ ಕಾನೂನು ತತ್ವದ ಶಿಕ್ಷಣ ಅಗತ್ಯವೆನಿಸಿದರೆ ಅವರು ಉಪನ್ಯಾಸ ಕಾರ್ಯಕ್ರಮ ಆಯೋಜಿಸಬಹುದು. ನಾನು ಅಲ್ಲಿಗೆ ತೆರಳಿ ಮಾತನಾಡುತ್ತೇನೆ’.

ಹೈಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.