ADVERTISEMENT

ಭಿನ್ನಮತ ಶಮನಕ್ಕೆ ವೇಣುಗೋಪಾಲ್ ಸಂಧಾನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 20:26 IST
Last Updated 21 ನವೆಂಬರ್ 2019, 20:26 IST
ಕೆ.ಸಿ ವೇಣುಗೋಪಾಲ್
ಕೆ.ಸಿ ವೇಣುಗೋಪಾಲ್   

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಶಮನ ಮಾಡಲು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂದಾಗಿದ್ದಾರೆ. ಶುಕ್ರವಾರ ನಗರಕ್ಕೆ ಭೇಟಿ ನೀಡಲಿದ್ದು, ಹಿರಿಯ ನಾಯಕರ ಜತೆಗೆ ಸಭೆನಡೆಸಿ ವಿಧಾನಸಭೆ ಉಪಚುನಾವಣೆ ಗೆಲುವಿನ ಬಗ್ಗೆ ಕಾರ್ಯತಂತ್ರ ರೂಪಿಸಲಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಪಕ್ಷದ ಹಿರಿಯ ನಾಯಕರು ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಹಾಗೂ ಹಿರೀಕರ ನಡುವಿನ ಜಗಳ ವರಿಷ್ಠರ ಅಂಗಳ ತಲುಪಿದ್ದು, ರಾಜ್ಯ ನಾಯಕರ ಜತೆಗೆ ಮಾತುಕತೆ ನಡೆಸಿ, ಮುಖಾಮುಖಿ ಚರ್ಚಿಸಿ ಸಮಸ್ಯೆ ಪರಿಹರಿಸುವಂತೆ ವರಿಷ್ಠರು ಸೂಚಿಸಿರುವ ಹಿನ್ನೆಲೆಯಲ್ಲಿ ವೇಣುಗೋಪಾಲ್ ಬರುತ್ತಿದ್ದಾರೆ.

ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಆರಂಭವಾದ ಭಿನ್ನಾಭಿಪ್ರಾಯ ನಂತರ ತೀವ್ರ ಸ್ವರೂಪ ಪಡೆದುಕೊಂಡು, ವರಿಷ್ಠರನ್ನೂ ಮುಟ್ಟಿತ್ತು. ಸಿದ್ದರಾಮಯ್ಯ ಬಣದ ವಿರುದ್ಧ ಹಿರೀಕರು ದೆಹಲಿ ನಾಯಕರಿಗೆ ದೂರು ಸಲ್ಲಿಸಿದ್ದರು. ಈಚೆಗೆ ದೆಹಲಿಗೆ ತೆರಳಿದ್ದ ದಿನೇಶ್ ಗುಂಡೂರಾವ್ ಸಹ ಹಿರಿಯರ ವಿರುದ್ಧ ಪ್ರತಿದೂರು ಕೊಟ್ಟಿದ್ದರು. ಪಕ್ಷದಲ್ಲಿನ ಆಂತರಿಕ ಗೊಂದಲ, ಅಸಮಾಧಾನ ಮುಂದುವರಿದರೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ವೇಣುಗೋಪಾಲ್ ಮೂಲಕ ಸಂದಾನ ನಡೆಸಲಾಗುತ್ತಿದೆ.

ADVERTISEMENT

ಸಿದ್ದರಾಮಯ್ಯ ಪ್ರಚಾರ ಆರಂಭಿಸಿದ್ದರೂ ಹಿರಿಯ ನಾಯಕರು ಇನ್ನೂ ಅಖಾಡಕ್ಕೆ ಇಳಿದಿಲ್ಲ. ಎರಡು ಬಣಗಳ ಮುಖಂಡರನ್ನು ಒಗ್ಗೂಡಿಸಿ ಭಿನ್ನಾಭಿಪ್ರಾಯ ಶಮನ ಮಾಡಲಿದ್ದಾರೆ. ನಂತರ ಎಲ್ಲರೂ ಸಂಘಟಿತರಾಗಿ ಪ್ರಚಾರಕ್ಕೆ ಇಳಿಯುವಂತೆ ನೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ಉಪಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರದ ಅಳಿವು, ಉಳಿವನ್ನು ನಿರ್ಧರಿಸಲಿದೆ. ಕಾಂಗ್ರೆಸ್‌ಗೂ ಸಹ ಅಷ್ಟೇ ಮಹತ್ವದ್ದಾಗಿದ್ದು, ಮೈತ್ರಿ ಸರ್ಕಾರ ಕೆಡವಿ, ಪಕ್ಷಾಂತರ ಮಾಡಿದವರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ. ಪಕ್ಷಾಂತರಿಗಳಿಗೆ ಒಂದು ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಏನೆಲ್ಲ ಅವಕಾಶಗಳಿವೆ ಎಂಬ ಬಗ್ಗೆ ಚರ್ಚಿಸಿ, ಕಾರ್ಯತಂತ್ರ ರೂಪಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ಭಿನ್ನಮತವಿಲ್ಲ: ದಿನೇಶ್

‘ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಟ್ಟಾಗಿ ಉಪಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಲ್ಲಿ ಗುರುವಾರ ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಹಣ ನೀಡಿರುವುದಾಗಿ ಎಂ.ಟಿ.ಬಿ.ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಹಣ ಇದೆ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಬಾರದು. ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಾಲದ ವಿವರ ನಮೂದಿಸಿಲ್ಲ. ಹಾಗಾಗಿ ಚುನಾವಣೆ ಆಯೋಗ ಕ್ರಮಕೈಗೊಳ್ಳಬೇಕು.’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.