ADVERTISEMENT

‘ನಾನು ಕಟ್ಟಾ ಕಾಂಗ್ರೆಸ್ಸಿಗ, ಪೇಷೆಂಟ್ ಅಲ್ಲ: ಶಾಸಕ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 10:15 IST
Last Updated 17 ಸೆಪ್ಟೆಂಬರ್ 2018, 10:15 IST
ಡಾ. ಸುಧಾಕರ್
ಡಾ. ಸುಧಾಕರ್    

ಬೆಂಗಳೂರು: ‘ನಾನು ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಬಿಡುವ ಯಾವುದೇ ಯೋಚನೆಯೇ ನನಗೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನ ಇದೆ. ಅದನ್ನು ಹೇಳಿಕೊಂಡಿದ್ದೇನೆ ಅಷ್ಟೇ’ ಎಂದು ಶಾಸಕ ಡಾ. ಸುಧಾಕರ್ ಹೇಳಿದರು.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ‘ನಮ್ಮ ನಾಯಕರು ವಿದೇಶದಿಂದ ವಾಪಸ್ ಆಗಿದ್ದಾರೆ. ಹೀಗಾಗಿ ಭೇಟಿ ಮಾಡಲು ಬಂದಿದ್ದೆ. ಅವರ ಆರೋಗ್ಯ ವಿಚಾರಿಸಿದ್ದೇನೆ. ಅಸಮಾಧಾನದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.‌ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟಾಗಬಾರದೆಂಬ ಕಾರಣಕ್ಕೆ ಹೇಳಿದ್ದಾರೆ’ ಎಂದರು.

ಬಿಜೆಪಿಯ ‘ಆಪರೇಷನ್ ಕಮಲ’ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ನಾನು ಪೇಷೆಂಟ್ ಅಲ್ಲ. ಸರ್ಜನ್ ಕೂಡ ಅಲ್ಲ. ಹೀಗಾಗಿ ಆಪರೇಷನ್‌ಗೆ ಒಳಗಾಗುವ ಪ್ರಶ್ನೆಯೇ ಇಲ್ಲ’ ಎಂದರು.

ADVERTISEMENT

‘ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೊಂದು ನ್ಯಾಯ ಜೆಡಿಎಸ್ ಶಾಸಕರಿಗೊಂದು ನ್ಯಾಯ ಎಂಬಂತಾಗಿದೆ. ಜೆಡಿಎಸ್ ಶಾಸಕರ ಎಲ್ಲಾ ಕೆಲಸ ಸುಲಭವಾಗಿ ಆಗುತ್ತವೆ. ಆದರೆ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಬಳಿ ಹೋಗಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಇದು’ ಎಂದು ಅವರು ಸಿದ್ದರಾಮಯ್ಯ ಮುಂದೆ ಅಳಲು ತೋಡಿಕೊಂಡಿದ್ದಾರೆ.

‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಜೆಡಿಎಸ್ ನಾಯಕರ ಮಾತು ಜಿಲ್ಲೆಯಲ್ಲಿ ನಡೆಯುತ್ತದೆ. ಶಾಸಕನಾಗಿ ನನ್ನ ಮಾತಿಗೆ ಬೆಲೆ ಇಲ್ಲ. ಸರ್ಕಾರದ ಮಟ್ಟದಲ್ಲಿ ಪರಮೇಶ್ವರ ಹಾಗೂ ಡಿ.ಕೆ. ಶಿವಕುಮಾರ್ ನಿರ್ಲಿಪ್ತರಾಗಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ’ ಎಂದೂ ಸುಧಾಕರ್ ದೂರಿದ್ದಾರೆ.

ಎಲ್ಲವನ್ನೂ ಆಲಿಸಿದ ಸಿದ್ದರಾಮಯ್ಯ, ನಿಮ್ಮನ್ನು ನನ್ನ ಬೆಂಬಲಿಗ ಅಂತಾರೆ. ನೀವು ಏನೇ ಮಾತನಾಡಿದರೂ ಅದು ನನ್ನ ಸೂಚನೆ ಮೇರೆಗೆ ಅಂತ ಬಿಂಬಿಸುತ್ತಾರೆ. ನಮ್ಮ ಪಕ್ಷದವರೇ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಿರುವಾಗ ಯಾಕೆ ಬಹಿರಂಗವಾಗಿ ಮಾತನಾಡುತ್ತೀರಿ. ಏನೇ ಅಸಮಾಧಾನ, ನೋವು ಇದ್ದರೂ ನನಗೆ ಹೇಳಿ. ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬೇಡಿ’ ಎಂದು ಸುಧಾಕರ್ ಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಅತೃಪ್ತ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿ ಚರ್ಚಿಸಿದರು.

ಸಚಿವ ಪುಟ್ಟರಂಗಶೆಟ್ಟಿ, ಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಾಜಿ ಶಾಸಕ ಅಶೋಕ ಪಟ್ಟಣ ಕೂಡಾ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.