ADVERTISEMENT

ಕಡ್ಲಿಗರ ಹುಣ್ಣಿಮೆ: ಕೃಷ್ಣೆಯ ಒಡಲು ತುಂಬಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 14:35 IST
Last Updated 10 ಜುಲೈ 2025, 14:35 IST
ಆಲಮಟ್ಟಿಯ ಚಂದ್ರಮ್ಮಾದೇವಸ್ಥಾನದ ಬಳಿ ಗುರುವಾರ, ಕಡ್ಲಿಗರ ಹುಣ್ಣಿಮೆಯ ನಿಮಿತ್ತ ಮಹಿಳೆಯರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದರು
ಆಲಮಟ್ಟಿಯ ಚಂದ್ರಮ್ಮಾದೇವಸ್ಥಾನದ ಬಳಿ ಗುರುವಾರ, ಕಡ್ಲಿಗರ ಹುಣ್ಣಿಮೆಯ ನಿಮಿತ್ತ ಮಹಿಳೆಯರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದರು   

ಆಲಮಟ್ಟಿ: ಕಡ್ಲಿಗರ ಹುಣ್ಣಿಮೆಯಂದು ಕಡಲಿಗೆ ಒಡಲು ತುಂಬುವುದು ಸಂಪ್ರದಾಯ. ಇಲ್ಲಿನ ರೈತರು, ಜನರು ಪಾಲಿಗೆ ಕೃಷ್ಣೆ ದೇವಿಯ ಸಮಾನ. ಹುಣ್ಣಿಮೆಯಂದು ಜೀವನದಿ ಕೃಷ್ಣೆಗೆ ರೈತರು, ಮಹಿಳೆಯರು ಸೇರಿ ಬಾಗಿನ ಅರ್ಪಿಸುವ, ಪೂಜೆ ಸಲ್ಲಿಸುವ, ಒಡಲು ತುಂಬುವ ಆಚರಣೆ ಮೊದಲಿನಿಂದಲೂ ರೂಢಿಯಲ್ಲಿದೆ.

ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ರಭಸದ ಅಲೆಗಳು ದಂಡೆಗೆ ಬಂದು ಅಪ್ಪಿಳಿಸುತ್ತಿವೆ. ಹುಣ್ಣಿಮೆಯಂದು ಈ ಅಲೆಗಳ ಭೋರ್ಗರೆತ ಇನ್ನೂ ಹೆಚ್ಚು. ಇಂತಹ ಕೃಷ್ಣೆಗೆ ಗುರುವಾರ ಮಹಿಳೆಯರು ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಹಲವಾರು ಮಹಿಳೆಯರು ಇಲ್ಲಿನ ಚಂದ್ರಮ್ಮಾ ದೇವಸ್ಥಾನದ ಬಳಿಯ ಕೃಷ್ಣಾ ನದಿಗೆ ಆಗಮಿಸಿ, ಪೂಜೆ ಸಲ್ಲಿಸಿ ಬಾಗಿನ ಹಾಗೂ ಉಡಿ ತುಂಬಿ ಕೃಷ್ಣೆಗೆ ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರತಿ ವರ್ಷ ಈ ಭಾಗದ ರೈತರೆಲ್ಲಾ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಸೇರಿ ಕಡ್ಲಿಗರ ಹುಣ್ಣಿಮೆಗೆ ಬಾಗಿನ ಅರ್ಪಿಸುವ ಸಂಪ್ರದಾಯಕ್ಕೆ ಎರಡು ದಶಕಗಳ ಇತಿಹಾಸವಿದೆ. ಆದರೆ ಬರಬರುತ್ತಾ, ರೈತರ ಒಗ್ಗೂಡಿಕೆ ಕಡಿಮೆಯಾಯಿತು. ರೈತರು ಅರ್ಪಿಸುವ ಬಾಗಿನ ಸಂಪ್ರದಾಯವೂ ಕಡಿಮೆಯಾಗುತ್ತಾ ಬಂತು. ಜಲಾಶಯ ಪೂರ್ತಿಯಾದ ಮೇಲೆ ಬಾಗಿನ ಅರ್ಪಿಸಬೇಕೆಂಬ ಭಾವನೆಯೂ ಬೇರೂರಿತು. ಹೀಗಾಗಿ ಕಡ್ಲಿಗರ ಹುಣ್ಣಿಮೆಯ ದಿನ ಬಾಗಿನ ಸಂಪ್ರದಾಯ ಕಡಿಮೆಯಾಗುತ್ತಾ ಬಂತು.

ADVERTISEMENT

ಬಾಗಿನ ಅರ್ಪಿಸಿದ ಬಳಬಟ್ಟಿ ರೈತರು

ಗುರುವಾರ ಸಂಜೆ ಬಳಬಟ್ಟಿ ಗ್ರಾಮದ ಹಲವು ರೈತರು ಸೇರಿ ಕೃಷ್ಣೆಗೆ ಬಾಗಿನ ಅರ್ಪಿಸಿದರು.

‘ಯಾರು ಬಾಗಿನ ಅರ್ಪಿಸಲಿ ಬಿಡಲಿ, ಕೃಷ್ಣೆ ನಮಗೆ ಬದುಕು ಕೊಟ್ಟಿದೆ. ಹೀಗಾಗಿ ಈ ಹುಣ್ಣಿಮೆಯಂದು ಕೃಷ್ಣೆಗೆ ಪೂಜೆ ಸಲ್ಲಿಸುತ್ತೇವೆ’ ಎಂದು ಬಳಬಟ್ಟಿ ಗ್ರಾಮದ ವೈ.ಎಲ್. ಗಣಿ ಹೇಳಿದರು. ಎಸ್.ವೈ. ಮಾಳಗೊಂಡ, ಎಸ್.ಬಿ. ಕುಮಟಗಿ, ಬಿ.ಎಲ್. ತೋಳಮಟ್ಟಿ, ಪಿ.ಬಿ. ಹುಗ್ಗಿ, ಸುನಿಲ ಮಜ್ಜಗಿ, ಮಹಾಂತೇಶ ಹಿರೇಮಠ, ಎಸ್.ಕೆ. ಹುಗ್ಗಿ ಮತ್ತಿತರರು ಇದ್ದರು.

ಆಲಮಟ್ಟಿಯ ಚಂದ್ರಮ್ಮಾದೇವಸ್ಥಾನದ ಬಳಿ ಗುರುವಾರ ಬಳಬಟ್ಟಿ ಗ್ರಾಮದ ರೈತರು ಸೇರಿ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು
ಆಲಮಟ್ಟಿಯ ಚಂದ್ರಮ್ಮಾದೇವಸ್ಥಾನದ ಬಳಿ ಗುರುವಾರ ಬಳಬಟ್ಟಿ ಗ್ರಾಮದ ರೈತರು ಸೇರಿ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.