ADVERTISEMENT

ಕದ್ರಿ ಗೋಪಾಲನಾಥ್‌ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:42 IST
Last Updated 14 ಅಕ್ಟೋಬರ್ 2019, 19:42 IST

ಮಂಗಳೂರು: ಶುಕ್ರವಾರ ನಿಧನರಾಗಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಅವರ ಅಂತ್ಯಕ್ರಿಯೆ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಮಿತ್ತಕೆರೆಯಲ್ಲಿ ಸೋಮವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಮಧ್ಯಾಹ್ನ 3 ಗಂಟೆಗೆ ಗೋಪಾಲನಾಥ್‌ ಅವರ ಪಾರ್ಥಿವ ಶರೀರ ಮಿತ್ತಕೆರೆ ತಲುಪಿತು. ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಡಿವೈಎಸ್‌ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.

ಕಲಾವಿದರಾದ ನರಸಿಂಹಲು ವಡವಾಟಿ, ರಾಜೇಂದ್ರ ನಾಕೋಡ್‌, ಕೆ.ಸೇಖರ್‌ ಸೇರಿದಂತೆ ನೂರಾರು ಮಂದಿ ಗೌರವ ಸಲ್ಲಿಸಿದರು. ಸಂಸದ ನಳಿನ್‌ಕುಮಾರ್‌ ಕಟೀಲ್‌, ಶಾಸಕ ರಾಜೇಶ್‌ ನಾಯ್ಕ್‌, ಮಾಜಿ ಸಚಿವ ಬಿ. ರಮಾನಾಥ ರೈ ನಮನ ಸಲ್ಲಿಸಿದರು.

ADVERTISEMENT

ಜೋಗಿ ಸಮುದಾಯದ ಸಂಪ್ರದಾಯದಂತೆ ಗೋಪಾಲನಾಥ್‌ ಅವರ ಮಕ್ಕಳಾದ ಗುರುಪ್ರಸಾದ್‌, ಮಣಿಕಾಂತ್‌ ಕದ್ರಿ ಅಂತಿಮ ವಿಧಿ ವಿಧಾನ ನೆರವೇರಿಸಿದರು. ನಂತರ ಅವರ ಕುಟುಂಬದ ಜಮೀನಿನಲ್ಲಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.