ADVERTISEMENT

ಸಿ.ಎಂ ಸಿದ್ದರಾಮಯ್ಯ ಭೇಟಿಯಾದ ಸಚಿವ ಜಮೀರ್‌, ಶಾಸಕ ರಾಜು ಕಾಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:16 IST
Last Updated 25 ಜೂನ್ 2025, 16:16 IST
ಜಮೀರ್‌ ಅಹಮದ್‌ ಖಾನ್‌
ಜಮೀರ್‌ ಅಹಮದ್‌ ಖಾನ್‌   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ನವದೆಹಲಿಯಿಂದ ತಮ್ಮ ನಿವಾಸ ‘ಕಾವೇರಿ’ಗೆ ವಾಪಸಾಗುತ್ತಿದ್ದಂತೆ, ವಸತಿ ಸಚಿವ ಬಿ.ಝೆಡ್‌. ಜಮೀರ್‌ ಅಹಮದ್‌ಖಾನ್ ಮತ್ತು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

‘ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ನಡೆಯುತ್ತಿದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್‌. ಪಾಟೀಲ ಮಾಡಿದ್ದ ಆರೋಪಗಳ ಕುರಿತಂತೆ, ಜಮೀರ್ ಅಹಮದ್‌ ಖಾನ್‌ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ಪಾಟೀಲ ಅವರು ಮಾಡಿದ್ದ ಆರೋಪಗಳ ಬಗ್ಗೆ ಜಮೀರ್‌ ಅವರಿಂದ ಮುಖ್ಯಮಂತ್ರಿ ವಿವರಣೆ ಪಡೆದರು ಎಂದೂ ಗೊತ್ತಾಗಿದೆ.

ಪಾಟೀಲರು ಆರೋಪ ಮಾಡಿದ್ದ ಬೆನ್ನಿಗೆ, ‘ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಒಂದು ಕೆಲಸವೂ ಆಗುತ್ತಿಲ್ಲ. ಮುಖ್ಯಮಂತ್ರಿಯನ್ನು ಶೀಘ್ರ ಭೇಟಿಯಾಗಿ ರಾಜೀನಾಮೆ ಬಗ್ಗೆ ನಿರ್ಧರಿಸುವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕಾಗವಾಡ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರವೂ ಏರಿದ ಧ್ವನಿಯಲ್ಲಿ ಮಾತನಾಡಿದ್ದ ಅವರು, ‘ಸಿದ್ದರಾಮಯ್ಯ ಮೊದಲಿನಂತಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದರು.

ADVERTISEMENT

ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕುರಿತಂತೆ ಮಾಡಿದ್ದ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಜೊತೆ ರಾಜು ಕಾಗೆ ಕೆಲಹೊತ್ತು ಸಮಾಲೋಚನೆ ನಡೆಸಿದರು. ಅಲ್ಲದೆ, ಸಮಸ್ಯೆಗಳನ್ನೂ ತೋಡಿಕೊಂಡರು ಎಂದು ಗೊತ್ತಾಗಿದೆ.

ಡಿಕೆಶಿ ಭೇಟಿಯಾದ ಬಿ.ಆರ್‌. ಪಾಟೀಲ: ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಬುಧವಾರ ಸಂಜೆ ಬಿ.ಆರ್‌. ಪಾಟೀಲ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.

ಅಸಮಾಧಾನ ವ್ಯಕ್ತಪಡಿಸಿದ್ದ ವರಿಷ್ಠರು: ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಮುಖ್ಯಮಂತ್ರಿ ಭೇಟಿ ಮಾಡಿದ್ದರು. ಈ ವೇಳೆ, ಶಾಸಕರ ಬಹಿರಂಗ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ವರಿಷ್ಠರು, ಶಾಸಕರ ಜೊತೆ ಚರ್ಚಿಸಿ, ಗೊಂದಲಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದರು. ಹೀಗಾಗಿ, ದೆಹಲಿಯಿಂದ ವಾಪಸಾಗುತ್ತಿದ್ದಂತೆ ಸಚಿವರು, ಶಾಸಕರ ಜೊತೆಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.