ADVERTISEMENT

ಕಲಬುರ್ಗಿ ಹತ್ಯೆ: ಕಿತ್ತೂರಲ್ಲಿ ಬೈಕ್‌ ಬಿಟ್ಟಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:00 IST
Last Updated 5 ಜೂನ್ 2019, 19:00 IST
ಧಾರವಾಡದ ಕಲ್ಯಾಣ ನಗರದಲ್ಲಿರುವ ಡಾ. ಎಂ.ಎಂ.ಕಲಬುರ್ಗಿ ಅವರ ಮನೆಗೆ ಆರೋಪಿಗಳನ್ನು ಕರೆತಂದ ಎಸ್‌ಐಟಿ ಅಧಿಕಾರಿಗಳು ಸ್ಥಳದ ಮಹಜರು ನಡೆಸಿದರು
ಧಾರವಾಡದ ಕಲ್ಯಾಣ ನಗರದಲ್ಲಿರುವ ಡಾ. ಎಂ.ಎಂ.ಕಲಬುರ್ಗಿ ಅವರ ಮನೆಗೆ ಆರೋಪಿಗಳನ್ನು ಕರೆತಂದ ಎಸ್‌ಐಟಿ ಅಧಿಕಾರಿಗಳು ಸ್ಥಳದ ಮಹಜರು ನಡೆಸಿದರು   

ಧಾರವಾಡ: ಹಿರಿಯ ವಿಮರ್ಶಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಡೆಸಿದ ಆರೋಪಿಗಳು ತಮ್ಮ ಬೈಕ್ ಅನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

ಇದಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಅಮೋಲ ಕಾಳೆ ಮತ್ತು ಪ್ರವೀಣ ಪ್ರಕಾಶ ಚತುರನನ್ನು ಇಲ್ಲಿನ ಕಲ್ಯಾಣ ನಗರದಲ್ಲಿರುವ ಡಾ. ಕಲಬುರ್ಗಿ ಮನೆ ಮತ್ತು ಕಿತ್ತೂರಿನಲ್ಲಿ ಬೈಕ್ ಬಿಟ್ಟು ಹೋಗಿದ್ದ ಎರಡೂ ಸ್ಥಳಗಳಿಗೆ ಬುಧವಾರ ಕರೆದೊಯ್ದು ಮಹಜರು ನಡೆಸಿದರು.

ಇಲ್ಲಿನ ಕಲ್ಯಾಣ ನಗರದಲ್ಲಿರುವ ಮನೆಯಲ್ಲಿ 2015ರ ಆ.30ರಂದು ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಕಾಳೆ ಮೇಲೆ ಯೋಜನೆ ರೂಪಿಸಿದ ಆರೋಪ ಇದ್ದರೆ, ಅವನನ್ನು ಬೈಕ್‌ನಲ್ಲಿ ಕರೆದೊಯ್ದ ಆರೋಪ ಚತುರನ ಮೇಲಿದೆ.

ADVERTISEMENT

ಕೃತ್ಯ ನಡೆದ ಜಾಗದಿಂದ (ಮನೆ ಬಾಗಿಲು) ಗೇಟ್‌ ಹಾಗೂ ಗೇಟ್‌ನಿಂದ ನಿಲ್ಲಿಸಿದ್ದ ಬೈಕ್‌ಗೆ ಇದ್ದ ಅಂತರವನ್ನು ಅಧಿಕಾರಿಗಳು ದಾಖಲಿಸಿದರು. ತನಿಖಾ ತಂಡದಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಇದ್ದರು. ಸ್ಥಳದಲ್ಲಿ ಛಾಯಾಚಿತ್ರ ತೆಗೆಯಲು ನಿರ್ಬಂಧಿಸಲಾಗಿತ್ತು.

ಉಮಾದೇವಿ ಕಲಬುರ್ಗಿ ಪ್ರತಿಕ್ರಿಯಿಸಿ, ‘ಎಸ್‌ಐಟಿ ತಂಡದವರು ಬಂದಿದ್ದು ಗೊತ್ತಾಗಿಲ್ಲ. ಅವರು ನನ್ನನ್ನು ಕರೆಯಲೂ ಇಲ್ಲ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ನಾವು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.