ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನಿಂದ ₹1.04 ಕೋಟಿ ವೆಚ್ಚ: ಮನು ಬಳಿಗಾರ್

ಕಲಬುರ್ಗಿಯ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 5:35 IST
Last Updated 20 ಮಾರ್ಚ್ 2020, 5:35 IST
ಮನು ಬಳಿಗಾರ್
ಮನು ಬಳಿಗಾರ್   

ಬೆಂಗಳೂರು: ‘ಕಲಬುರ್ಗಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ₹1.04 ಕೋಟಿ ಖರ್ಚು ಮಾಡಲಾಗಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಗುರುವಾರ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಲೆಕ್ಕಪತ್ರದ ವಿವರ ನೀಡಿದ ಅವರು, ‘ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ, ಸನ್ಮಾನಿತರಿಗೆ ಗೌರವ ಸಂಭಾವನೆ ಮತ್ತು ಪ್ರಯಾಣ ವೆಚ್ಚ, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಅತಿಗಣ್ಯರು, ತಾಲ್ಲೂಕು ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳ, ಸಿಬ್ಬಂದಿ ಪ್ರಯಾಣಕ್ಕೆ ₹57.17 ಲಕ್ಷ ವೆಚ್ಚವಾಗಿದೆ’ ಎಂದು ಹೇಳಿದರು.

ಸಮ್ಮೇಳನ ಸಂಬಂಧ ನಡೆಸಿದ ಕಾರ್ಯಕಾರಿ ಸಮಿತಿ ಸಭೆ ಮತ್ತು ಪೂರ್ವಭಾವಿ ಸಭೆಗಳಿಗೆ ₹57,855, ವಿಶೇಷ ‘ಕನ್ನಡ ನುಡಿ’ ಮುದ್ರಣ ಮಾಡಿ ಎಲ್ಲಾ ಸದಸ್ಯರಿಗೆ ರವಾನಿಸಲು ₹21.41 ಲಕ್ಷ, ಆಹ್ವಾನ ಪತ್ರ ಮುದ್ರಣಕ್ಕೆ ₹3.36 ಲಕ್ಷ, ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಮತ್ತು ಒಒಡಿ ಮುದ್ರಣಕ್ಕೆ ₹96‌,560, ಸಮ್ಮೇಳನಕ್ಕಾಗಿ ಲೇಖನ ಸಾಮಗ್ರಿ, ಸನ್ಮಾನ ಪರಿಕರಗಳಿಗೆ ₹2.08 ಲಕ್ಷ ವೆಚ್ಚವಾಗಿದೆ ಎಂದರು.

ADVERTISEMENT

ಬ್ಯಾನರ್ ಮತ್ತು ಕಟ್ಟಡ ದೀಪಾಲಂಕಾರಕ್ಕೆ ₹1.68 ಲಕ್ಷ, ಸ್ವಾಗತ ಸಮಿತಿ ಮತ್ತು ಸನ್ಮಾನಿತರ ಸ್ಮರಣಿಕೆಗಳು ಮತ್ತು ಫಲಕಕ್ಕೆ ₹70,269, ಸಮ್ಮೇಳನದ ಭಾವಚಿತ್ರಗಳಿಗೆ (ಬಿಲ್‌ ಬರಬೇಕಿದೆ) ₹95 ಸಾವಿರ, ಅಂಚೆ ವೆಚ್ಚ(ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪತ್ರಗಳು) ₹56,277, ಸಮ್ಮೇಳನಕ್ಕಾಗಿ ಸಿಬ್ಬಂದಿಗಳು ಹೆಚ್ಚುವರಿಯಾಗಿ ಕೆಲಸ ಮಾಡಿದಕ್ಕೆ ಭತ್ಯೆ ಮತ್ತು ಗೌರವ ಸಂಭಾವನೆ ₹3.40 ಲಕ್ಷ, ಸ್ವಾಗತ ಸಮಿತಿ ಪೂರ್ವ ಸಿದ್ಧತೆಗಾಗಿ ಮುಂಗಡ ಹಣವಾಗಿ ₹10 ಲಕ್ಷ, ಸಮ್ಮೇಳನಾಧ್ಯಕ್ಷರ ಹೆಸರಿನಲ್ಲಿ ದತ್ತಿ ಸ್ಥಾಪನೆಗೆ ₹2 ಲಕ್ಷ ನೀಡಲಾಗಿದೆ ಎಂದು ವಿವರಿಸಿದರು.

‘ಸಣ್ಣ ಪುಟ್ಟ ವೆಚ್ಚಗಳನ್ನು ಬಿಟ್ಟು ₹2 ಸಾವಿರಕ್ಕಿಂತ ಮೇಲ್ಪಟ್ಟ ವೆಚ್ಚವನ್ನು ಅಕೌಂಟ್ ಪೇ ಚೆಕ್‌ ಮೂಲಕವೇ ಪಾವತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಲೆಕ್ಕಕೊಡಿ’ ಎಂದು ಕೆಲವರು ಕೇಳಿದ್ದರಲ್ಲಿ ತಪ್ಪೇನೂ ಇಲ್ಲ. ಯಾರು ಕೇಳಲಿ, ಬಿಡಲಿ ಲೆಕ್ಕ ಕೊಡುವುದು ನಮ್ಮ ಜವಾಬ್ದಾರಿ. ಲೆಕ್ಕಕೊಡಲು 6 ತಿಂಗಳ ಕಾಲಾವಕಾಶ ಇದ್ದರೂ ಈಗಲೇ ಕೊಡುತ್ತಿದ್ದೇವೆ’ ಎಂದರು.

‘ಸಾಹಿತ್ಯ ಪರಿಷತ್ತು ಮಾಡಿದ ಖರ್ಚಿನ ಬಗ್ಗೆ ಮಾತ್ರ ನಾವು ಲೆಕ್ಕ ಕೊಟ್ಟಿದ್ದೇವೆ. ಕಳೆದ ಬಾರಿಯ ಸಮ್ಮೇಳನದಲ್ಲೂ ಹೆಚ್ಚು ಕಡಿಮೆ ಇಷ್ಟೇ ಖರ್ಚಾಗಿತ್ತು. ಇಷ್ಟರಲ್ಲೇ ಸಮ್ಮೇಳನ ಮುಗಿದಿಲ್ಲ. ಕಲಬುರ್ಗಿ ಜಿಲ್ಲಾಡಳಿತವೂ ಖರ್ಚು ಮಾಡಿದ್ದು, ಒಟ್ಟಾರೆ ವೆಚ್ಚ ₹14 ಕೋಟಿಯಿಂದ ₹15 ಕೋಟಿ ಆಗಿರಬಹುದು’ ಎಂದು ಹೇಳಿದರು.

*
20ಕ್ಕೂ ಹೆಚ್ಚು ಸಾಹಿತಿಗಳೊಂದಿಗೆ ನಿಯೋಗ ತೆರಳಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
-ಮನು ಬಳಿಗಾರ್, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.