ಕಲಬುರಗಿಯ ಜಿಮ್ಸ್ ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಿಂದ ಎರಡು ದಿನಗಳ ಹಿಂದೆ ಅಪಹರಣಕ್ಕೆ ಒಳಗಾದ ನವಜಾತ ಗಂಡು ಶಿಶುವನ್ನು ಬುಧವಾರ ಬೆಳಿಗ್ಗೆ ಪೊಲೀಸರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದರು
ಕಲಬುರಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಿಂದ ಅಪಹರಣಗೊಂಡಿದ್ದ ನವಜಾತ ಗಂಡು ಶಿಶುವನ್ನು ಬುಧವಾರ ಬೆಳಿಗ್ಗೆ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ.
ಶುಶ್ರೂಷಕಿಯರ (ನರ್ಸ್) ಸೋಗಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಸೋಮವಾರ ಮಧ್ಯಾಹ್ನ ಅಪಹರಿಸಿದ್ದರು. ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿಶು ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ತ್ವರಿತಗತಿಯಲ್ಲಿ ತನಿಖೆ ನಡೆಸಿದ ಪೊಲೀಸರು, ಶಿಶುವನ್ನು ಪತ್ತೆ ಹಚ್ಚಿ ತಾಯಿಗೆ ಒಪ್ಪಿಸಿದ್ದಾರೆ.
ಶಿಶುವನ್ನು ಅಪಹರಿಸಿದ ಆರೋಪದಡಿ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಎಂಬುವವರನ್ನು ಬಂಧಿಸಲಾಗಿದೆ. ಶಿಶುವನ್ನು ಅಪಹರಿಸಿದ ಬಳಿಕ ಖೈರುನ್ ಎಂಬ ಮಹಿಳೆಗೆ ₹50 ಸಾವಿರಕ್ಕೆ ಮಾರಾಟ ಮಾಡಿದ್ದರು. ಶಿಶು ಕಾಣೆಯಾದ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದ ಅಲ್ಲಿನ ಸ್ಥಳೀಯರು, ಖೈರುನ್ ಮನೆಯಲ್ಲಿ ಹಸುಳೆಯನ್ನು ನೋಡಿ ಅನುಮಾನಗೊಂಡರು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಹಸುಳೆಯನ್ನು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಒಪ್ಪಿಸಿದರು.
ಮಗು ಆಗಿರಲಿಲ್ಲ
ದಂಪತಿಗೆ ಕಳೆದ 6-7 ವರ್ಷಗಳಿಂದ ಮಗು ಆಗಿರಲಿಲ್ಲ. ಮಗುವನ್ನು ದತ್ತಪಡೆಯಲು ಯತ್ನಿಸಿದ್ದು, ಗಂಡು ಮಗು ಸಿಗಲಿಲ್ಲ. ಹೀಗಾಗಿ, ದಂಪತಿಯು ಪರಿಚಯಸ್ಥರ ಮೂಲಕ ಗಂಡು ಮಗುವನ್ನು ಅಪಹರಿಸಲು ಮುಂಗಡವಾಗಿ ₹25 ಸಾವಿರ ಕೊಟ್ಟಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.