ADVERTISEMENT

ಸಾಯಲು, ಶೂಟ್ ಮಾಡಲು ಸಿದ್ಧ: ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:32 IST
Last Updated 11 ನವೆಂಬರ್ 2022, 19:32 IST
ಮಣಿಕಂಠ ರಾಠೋಡ ಮತ್ತು ಪ್ರಿಯಾಂಕ್ ಖರ್ಗೆ
ಮಣಿಕಂಠ ರಾಠೋಡ ಮತ್ತು ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಚಿತ್ತಾಪುರ ಕ್ಷೇತ್ರದ ನಾನು ಬಡವರ ಪರ ಕೆಲಸ ಮಾಡುತ್ತಿದ್ದೇನೆ. ನೀವು ಎಕೆ–47ನಿಂದ ಶೂಟ್ ಮಾಡಿದರೂ ನಾನು ಸಾಯಲು ಸಿದ್ಧ. ತಮಗೂ ಶೂಟ್ ಮಾಡಲು ಸಿದ್ಧ’ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದರು.

‘ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್‌ನವರು ಮನಸ್ಸು ಮಾಡಿದರೇ ಬಿಜೆಪಿಯವರು ಜಿಲ್ಲೆಯಲ್ಲಿ ಓಡಾಡದಂತೆ ಮಾಡುವುದಾಗಿ ಹೇಳಿದ್ದಾರೆ. ಚಿತ್ತಾಪುರದಲ್ಲಿ ಬಹಿರಂಗವಾಗಿ ಓಡಾಡುತ್ತಿರುವ ನಾನು ಶಾಸಕರ ಎಲ್ಲಾ ಸವಾಲುಗಳನ್ನು ಒಪ್ಪಿ ಮುಖಾಮುಖಿ ಚರ್ಚೆಗೆ ಸಿದ್ಧ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಪ್ರಿಯಾಂಕ್ ಖರ್ಗೆ ಅವರು ಆನೆ ಬಲ ಬಂದಂತೆ ಆಡುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸುತ್ತೇವೆ. ರಾಜಕೀಯ ಒತ್ತಡ ತಂದು, ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ನನ್ನ ವಿರುದ್ಧ ಗಡಿಪಾರು ಆದೇಶ ಹೊರಡುವಂತೆ ಮಾಡಿದರು. ಆದರೆ, ನನಗೆ ಗಡಿಪಾರು ಆದೇಶ ಬಂದಾಗ ನೀವೇ (ಪ್ರಿಯಾಂಕ್ ಖರ್ಗೆ) ಗಡಿಪಾರು ಆಗಿದ್ದೀರಾ’ ಎಂದು ವ್ಯಂಗ್ಯವಾಡಿದರು.

ADVERTISEMENT

ತಡೆಯಾಜ್ಞೆ: ಅಕ್ರಮ ಪಡಿತರ ಸಾಗಣೆ ಮತ್ತು ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಯಾದ ಗಿರಿ ಜಿಲ್ಲೆಯ ಮಣಿಕಂಠ ರಾಠೋಡ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಮಣಿಕಂಠ ಗೆ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಗೆ 1 ವರ್ಷ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆದರೆ ಅವರು ಗಡಿಪಾರು ಆದೇಶದ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ.

ಮಾತಿಗೂ ಮುನ್ನ ಕಾನೂನು ಅರಿಯಲಿ: ಪ್ರಿಯಾಂಕ್‌ ಖರ್ಗೆ
ಕಲಬುರಗಿ:
‘ಮನ ಬಂದಂತೆ ಮಾತನಾಡುವ ಮುನ್ನ ಮಣಿಕಂಠ ರಾಠೋಡ ಅವರು ಕಾನೂನು ಅರಿಯಬೇಕು. ಕೀಳುಮಟ್ಟದ ರಾಜಕಾರಣಕ್ಕೆ ಆಸ್ಪದ ನೀಡಬಾರದು’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.‌‌‌

‘ಚಿತ್ತಾಪುರದಲ್ಲಿ ಯಾವತ್ತೂ ಕೀಳುಮಟ್ಟದ ರಾಜಕಾರಣ ನಡೆದಿರಲಿಲ್ಲ. ಸುಳ್ಳು ಪ್ರಕರಣ ದಾಖಲಿಸುವ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಂತಹ ಸ್ಥಿತಿ ಇರಲಿಲ್ಲ. ಆದರೆ, ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದೆ’ ಎಂದು ಅವರು ತಿಳಿಸಿದರು.

‘ಗಡಿಪಾರು ಆದೇಶ ಹೊರಡಿಸಿದ್ದು ಅವರದ್ದೇ ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್‌ ಅಥವಾ ವಿರೋಧಪಕ್ಷದವರಲ್ಲ. ಇದನ್ನು ಅವರು ತಿಳಿದು ಮಾತನಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.