ADVERTISEMENT

ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆದ 126 ವಿದ್ಯಾರ್ಥಿಗಳು

ಶಿಕ್ಷಣ ಸಂಸ್ಥೆ- ಅಧಿಕಾರಿಗಳ ಎಡವಟ್ಟು:

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 12:43 IST
Last Updated 25 ಜೂನ್ 2020, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಜಿಲ್ಲೆಯ 5 ಶಾಲೆಗಳ 126 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಖಸಗಿ ಅಭ್ಯರ್ಥಿಗಳಾಗಿ ಬರೆಯಬೇಕಾಯಿತು.

ಶಾಲೆಗಳ ಮಾನ್ಯತೆ ನವೀಕರಣ ಮಾಡದ ಮತ್ತು ಶಾಲಾ ತರಗತಿಗಳನ್ನು ನಡೆಸದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಐದು ಶಾಲೆಗಳ ವಿದ್ಯಾರ್ಥಿಗಳನ್ನು ಈ ಬಾರಿ ಪರೀಕ್ಷೆಗೆ ಪರಿಗಣಿಸಿರಲಿಲ್ಲ. ಅವರಿಗೆ ಹಾಲ್ ಟಿಕೆಟ್ ನೀಡಿರಲಿಲ್ಲ. ಆದರೂ ಗಂಭೀರವಾಗಿ ಪರಿಗಣಿಸದ ಆಡಳಿತ ಮಂಡಳಿಯವರು ಇಷ್ಟು ದಿನ ಮೌನ ವಹಿಸಿದ್ದು, ಕೊನೆ ಘಳಿಗೆಯಲ್ಲಿ ಹಾಲ್ ಟಿಕೆಟ್‌ಗಾಗಿ ಬೆಂಗಳೂರಿಗೆ ದೌಡಾಯಿಸಿದ್ದರು.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಇವರಿಗೆ ಖಾಸಗಿ ಅಭ್ಯರ್ಥಿಗಳಾಗಿ ಬರೆಯಲು ಅವಕಾಶ ನೀಡಿತು. ಪರೀಕ್ಷೆಗೆ ಕೇವಲ 2 ತಾಸು ಬಾಕಿ ಇರುವ ಮುನ್ನ ಮಕ್ಕಳ ಕೈಗೆ ಹಾಲ್ ಟಿಕೆಟ್ ಬಂದವು.

ADVERTISEMENT

ಇಷ್ಟು ದಿನ ಆತಂಕದಲ್ಲೇ ಕಳೆದ ವಿದ್ಯಾರ್ಥಿಗಳು ಕೊನೆಯ ಕ್ಷಣದಲ್ಲಿ ನಿಟ್ಟುಸಿರು ಬಿಟ್ಟರು. ಆದರೆ ಈ ಬೆಳವಣಿಗೆಯಿಂದ ತಮ್ಮ ಓದು, ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಎಂದೂ ಅಸಹಾಯಕತೆ ತೋಡಿಕೊಂಡರು.

ಆಗಸ್ಟ್ ತಿಂಗಳಿನಲ್ಲೇ ಮಾನ್ಯತೆ ನವೀಕರಣ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೋಂದಣಿಗೆ ಅವಕಾಶ ಇತ್ತು. ಈ ಎಲ್ಲ ಪ್ರಕ್ರಿಯೆಗಳನ್ನು ಆಯಾ ಶಾಲೆಗಳು ಆನ್ ಲೈನ್‌ನಲ್ಲಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು ಹೇಳಿದ್ದರೂ ನಿರ್ಲಕ್ಷ್ಯವಹಿಸಿದ್ದರು. ಅಲ್ಲದೇ ಸಂಖ್ಯಾಬಲ, ಹಾಜರಾತಿ ಇಲ್ಲದ ಕಾರಣ ಈ ಶಾಲೆಗಳನ್ನು ಅಮಾನ್ಯ ಮಾಡಲು ತಿಳಿಸಲಾಗಿದೆ ಎಂದೂ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವ ಶಾಲೆಗಳು?: ಕಲಬುರ್ಗಿ ದಕ್ಷಿಣ ವಲಯದ ಶಾಂತಿನಿಕೇತನ ಪ್ರೌಢಶಾಲೆಯ 24 ವಿದ್ಯಾರ್ಥಿಗಳು, ಅರ್ಚನಾ ಪ್ರೌಢ ಶಾಲೆಯ 6 ವಿದ್ಯಾರ್ಥಿಗಳು, ಕಲಬುರ್ಗಿ ಉತ್ತರ ವಲಯದ ಮಹೆಬೂಬ್ ಸುಬಾನಿ ಪ್ರೌಢ ಶಾಲೆಯ 27 ವಿದ್ಯಾರ್ಥಿಗಳು ಮತ್ತು ಸಂಜೀವಿನಿ ಕನ್ನಡ ಪ್ರೌಢ ಶಾಲೆಯ 20 ವಿದ್ಯಾರ್ಥಿಗಳು, ಕಡಕೋಳ ಮಡಿವಾಳೇಶವರ ಪ್ರೌಢಶಾಲೆಯ 49 ವಿದ್ಯಾರ್ಥಿಗಳು ಈ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರದ ನಿಯಮಗಳ ಪಾಲನೆ ಆಗದ ಕಾರಣ ಈ ಶಾಲೆಗಳ ಪರವಾನಗಿ ನವೀಕರಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮಾಡಿಲ್ಲ. ವಿದ್ಯಾರ್ಥಿಗಳನ್ನು ಅಧಿಕೃತ ಶಾಲೆಗೆ ಸೇರಿಸುವಂತೆ ಎಚ್ಚರಿಕೆ ಕೂಡ ನೀಡಿದ್ದೇವೆ. ಇದಕ್ಕೂ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಹೀಗಾಗಿ ಮಂಡಳಿಯಿಂದ ಹಾಲ್ ಟಿಕೆಟ್ ಬಂದಿರಲಿಲ್ಲ. ವಿದ್ಯಾರ್ಥಿಗಳ ಕಾಳಜಿಯಿಂದಾಗಿ ನಾವು ಖಾಸಗಿಯಾಗಿ ಪರೀಕ್ಷೆಗೆ ಅವಕಾಶ ಕೊಟ್ಟಿದ್ದೇವೆ. ಇದು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಷಯವಲ್ಲ. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪರೀಕ್ಷಾ ಮಂಡಳಿಗೆ ಸಂಬಂಧಿಸಿದ್ದು ಎಂದು ಡಿಡಿಪಿಐ ಎಸ್.ಪಿ.ಬಾಡಗಂಡಿ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.