ADVERTISEMENT

ಕಲಬುರ್ಗಿ ಹತ್ಯೆ: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:15 IST
Last Updated 14 ಫೆಬ್ರುವರಿ 2019, 20:15 IST
ಎಂ.ಎಂ.ಕಲಬುರ್ಗಿ
ಎಂ.ಎಂ.ಕಲಬುರ್ಗಿ   

ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಸಂಬಂಧ ಸಿಐಡಿ ಅಧಿಕಾರಿಗಳು ನಡೆಸುತ್ತಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಅದೇ ಕಾರಣಕ್ಕೆ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ನಿವೃತ್ತ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಲ್‌.ಎಸ್‌.ಸುಳ್ಳದ್ ಅವರನ್ನು ‘ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌’ ಆಗಿ ನೇಮಕ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳಿಗೆ, ಕಲಬುರ್ಗಿ ಹತ್ಯೆ ಬಗ್ಗೆ ಸುಳಿವು ಸಿಕ್ಕಿತ್ತು. ಅದೇ ಮಾಹಿತಿ ಆಧರಿಸಿ ಕಲಬುರ್ಗಿ ಹತ್ಯೆ ಪ್ರಕರಣವನ್ನು ಭೇದಿಸುತ್ತಿರುವ ಸಿಐಡಿ ಆಧಿಕಾರಿಗಳು ಈಗಾಗಲೇ ಸಾಕಷ್ಟು ಪುರಾವೆ ಸಂಗ್ರಹಿಸಿದ್ದಾರೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

ಸಿಐಡಿ ಉನ್ನತ ಅಧಿಕಾರಿಗಳ ಮನವಿ ಮೇರೆಗೆ ಕಲಬುರ್ಗಿ ಹತ್ಯೆ ಪ್ರಕರಣಕ್ಕಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ನೇಮಕ
ಮಾಡಲಾಗಿದೆ.

ADVERTISEMENT

ಇಬ್ಬರನ್ನು ಕಸ್ಟಡಿಗೆ ಪಡೆದಿದ್ದ ಸಿಐಡಿ: ಗೌರಿ ಪ್ರಕರಣದ ಆರೋಪಿಗಳಾದ ಹುಬ್ಬಳ್ಳಿಯ ಅಮಿತ್ ಬದ್ದಿ ಹಾಗೂ ಗಣೇಶ್ ಮಿಸ್ಕಿನ್‌ನನ್ನು ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯದ ಮೂಲಕ ಕಸ್ಟಡಿಗೆ ಪಡೆದಿದ್ದ ಸಿಐಡಿ ಅಧಿಕಾರಿಗಳು, ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

‘ಗೌರಿ ಹತ್ಯೆ ಆರೋಪಿಗಳೇ, ಎರಡೂ ಹತ್ಯೆಗೂ ಒಳಸಂಚು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಗೌರಿ ಅವರಿಗೆ ಗುಂಡು ಹೊಡೆದ ಆರೋಪಿಯನ್ನು ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದು, ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಕಲಬುರ್ಗಿಯವರಿಗೆ ಗುಂಡು ಹೊಡೆದದ್ದು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಸಿಐಡಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ರಾಜ್ಯಗಳಲ್ಲಿ ಸಂಚು: ‘ಧಾರವಾಡದ ಕಲ್ಯಾಣ ನಗರದಲ್ಲಿರುವ ಕಲಬುರ್ಗಿ ಅವರ ಮನೆಗೆ 2015ರ ಆಗಸ್ಟ್ 30ರಂದು ಬೆಳಿಗ್ಗೆ 8.40 ಗಂಟೆ ಸುಮಾರಿಗೆ ಬಂದಿದ್ದ ದುಷ್ಕರ್ಮಿಗಳಿಬ್ಬರ ಪೈಕಿ ಒಬ್ಬಾತ, ಕಲಬುರ್ಗಿಯವರ ಹಣೆ ಹಾಗೂ ಎದೆಗೆ ಗುಂಡಿಕ್ಕಿದ್ದ. ನಂತರ, ಅವರಿಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದರು’ ಎಂದು ಅಧಿಕಾರಿ ಹೇಳಿದರು.

‘ಕಲಬುರ್ಗಿ ಹತ್ಯೆಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಂಚು ರೂಪಿಸಲಾಗಿತ್ತು. ಮೂರು ರಾಜ್ಯಗಳಲ್ಲಿ ಓಡಾಡಿದ್ದ ಪ್ರಮುಖ ಆರೋಪಿ, ಹತ್ಯೆಗೆಂದೇ ತಂಡ ರಚಿಸಿದ್ದ. ಅದೇ ತಂಡದಲ್ಲಿ ಶೂಟರ್‌ ಸಹ ಇದ್ದ ಎಂಬ ಮಾಹಿತಿ ಇದ್ದು, ಆತ ಯಾರು ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದು ಅಧಿಕಾರಿವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.