ಬಾಗಲಕೋಟೆ: ಕಡಿಮೆ ನೀರು, ಬರ ಪರಿಸ್ಥಿತಿ ತಾಳಿಕೊಂಡು ವಾರ್ಷಿಕ ಇಳುವರಿಗೆ ಖೋತಾ ಮಾಡದೇ ಬೆಳೆಗಾರರ ಕೈ ಹಿಡಿಯುವ ’ಕಲ್ಪತರು’ ಹೆಸರಿನ ತೆಂಗಿನ ತಳಿಯನ್ನು ಹಾಸನ ಜಿಲ್ಲೆ ಅರಸೀಕೆರೆಯ ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದಲ್ಲಿ ಸೋಮವಾರದಿಂದ ತೋಟಗಾರಿಕೆ ಬೆಳೆ ಕ್ಷೇತ್ರೋತ್ಸವ ಆರಂಭವಾಗಿದೆ. ಅಲ್ಲಿ ’ಕಲ್ಪತರು‘ ತಳಿ ಬೆಳೆಗಾರರನ್ನು ಹೆಚ್ಚು ಆಕರ್ಷಿಸುತ್ತಿದೆ.
ಎಣ್ಣೆ ಅಂಶ ಹೆಚ್ಚು:
ಕಲ್ಪತರು ತೆಂಗಿನ ತಳಿಯಲ್ಲಿ ಎಣ್ಣೆ ಅಂಶ ಹೆಚ್ಚು. ಬೇರೆ ತಳಿಗಳ ಕೊಬ್ಬರಿಯಲ್ಲಿ ಶೇ 60ಕ್ಕಿಂತ ಕಡಿಮೆ ಪ್ರಮಾಣದ ಎಣ್ಣೆಯ ಅಂಶ ಇದ್ದರೆ, ಕಲ್ಪತರು ತಳಿಯಲ್ಲಿ ಶೇ 67ರಷ್ಟು ಇದೆ. ಕೊಬ್ಬರಿ ಪ್ರಮಾಣವೂ ಹೆಚ್ಚಿರುತ್ತದೆ. ತೆಂಗಿನ ಎಣ್ಣೆ ತೆಗೆದು ಖಾದ್ಯ ತೈಲವಾಗಿ ಬಳಕೆಗೆ ತೆಂಗು ಅಭಿವೃದ್ಧಿ ಮಂಡಳಿ ನೀಡುವ ಪ್ರೋತ್ಸಾಹಧನ ಬಳಸಿಕೊಂಡಲ್ಲಿ ರೈತರ ಆದಾಯವೂ ದ್ವಿಗುಣಗೊಳ್ಳಲಿದೆ ಎಂದು ಅರಸೀಕೆರೆ ತೋಟಗಾರಿಕೆ ಕೇಂದ್ರದ ಅಖಿಲ ಭಾರತ ತೆಂಗು ಸಮನ್ವಯ ಯೋಜನೆ ಮುಖ್ಯಸ್ಥ ಡಾ.ಆರ್.ಸಿದ್ದಪ್ಪ ಹೇಳುತ್ತಾರೆ.
ಬೇರೆ ತಳಿಗಳಿಗೆ ಹೋಲಿಸಿದರೆ ಕಲ್ಪತರುಗೆ ತಾಳಿಕೆ ಜಾಸ್ತಿ. ಹೀಗಾಗಿ ಅದು ಪಕ್ಕಾ ಮಳೆಯಾಶ್ರಿತ ತಳಿ. ಗಿಡವೊಂದು ವಾರ್ಷಿಕ ಸರಾಸರಿ 120 ಕಾಯಿ ಬಿಡುತ್ತದೆ. ನಾಟಿ ಮಾಡಿದ ಐದನೇ ವರ್ಷಕ್ಕೆ ಹೂವು ಬಿಡುತ್ತದೆ. ಆರನೇ ವರ್ಷದಿಂದ ಇಳುವರಿ ಆರಂಭವಾಗುತ್ತದೆ. ಮರ ಗರಿಷ್ಠ 15 ಮೀಟರ್‌ವರೆಗೆ ಬೆಳೆಯುತ್ತದೆ ಎನ್ನುತ್ತಾರೆ.
ಹಿರಿಯೂರು, ಚಿತ್ರದುರ್ಗ, ಹಾಸನ, ತುಮಕೂರು, ದಾವಣಗೆರೆ ಭಾಗದಲ್ಲಿ ಜೊತೆಗೆ ಬೀದರ್ ಜಿಲ್ಲೆಯಲ್ಲೂ ಕಲ್ಪತರು ತಳಿ ಬೆಳೆಯಲು ರೈತರು ಮುಂದಾಗಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಸಹಯೋಗದಲ್ಲಿ ಅರಸೀಕೆರೆ ಸಂಶೋಧನಾ ಕೇಂದ್ರದಲ್ಲಿ ಕಲ್ಪತರು ತಳಿ ಸಸಿಗಳ ಉತ್ಪಾದನೆ ಹಾಗೂ ರೈತರಿಗೆ ತಾಂತ್ರಿಕ ನೆರವು ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆಸಕ್ತ ರೈತರಿಗೆ ಜೂನ್ ತಿಂಗಳಲ್ಲಿ ಸಸಿ ನೀಡಲಾಗುವುದು ಎಂದು ಸಿದ್ದಪ್ಪ ಹೇಳುತ್ತಾರೆ. ಅವರ ಸಂಪರ್ಕ ಸಂಖ್ಯೆ: 9886821599.
ಇದೊಂದು ಶುದ್ಧ ತಳಿ...
‘ಬೇರೆ ಬೇರೆ ತಳಿಗಳ ಸಂಕರಣದಿಂದ ಕಲ್ಪತರು ಅಭಿವೃದ್ಧಿಪಡಿಸಿಲ್ಲ. ಬದಲಿಗೆ ಹುಡುಕಾಟದ ಮೂಲಕ ತಿಪಟೂರು ಭಾಗದಲ್ಲಿ ರೈತರೊಬ್ಬರ ಹೊಲದಲ್ಲಿ ಈ ತಳಿ ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಿದ್ದೇವೆ. ಇದೊಂದು ಶುದ್ಧ ತಳಿ ಎನ್ನುವ ಡಾ.ಆರ್.ಸಿದ್ದಪ್ಪ, ‘ಅದರ ಗುಣ ವಿಶೇಷ ಆಧರಿಸಿಯೇ ಕಲ್ಪತರು ಎಂದು ಹೆಸರಿಸಲಾಗಿದೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.