ADVERTISEMENT

ಹಂತ ಹಂತವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಣ ಬಿಡುಗಡೆ: ಅಜಯ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 16:08 IST
Last Updated 27 ಫೆಬ್ರುವರಿ 2025, 16:08 IST
ಅಜಯ್‌ ಸಿಂಗ್‌
ಅಜಯ್‌ ಸಿಂಗ್‌   

ಬೆಂಗಳೂರು: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಒದಗಿಸಿರುವ ₹ 5 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ₹ 750 ಕೋಟಿ ಬಿಡುಗಡೆಗೆ ಪ್ರಕ್ರಿಯೆ ನಡೆದಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ ಸಿಂಗ್‌ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಂಡಳಿ ವತಿಯಿಂದ ₹ 2,600 ಕೋಟಿ ವೆಚ್ಚವಾಗಿದೆ. ಮಾರ್ಚ್‌ ಅಂತ್ಯದೊಳಗೆ ₹ 3 ಸಾವಿರ ಕೋಟಿ ಖರ್ಚಾಗಲಿದೆ. ಸರ್ಕಾರ ಹಂಚಿಕೆ ಮಾಡಿದ ಎಲ್ಲ ಅನುದಾನವನ್ನು ವೆಚ್ಚ ಮಾಡುತ್ತೇವೆ’ ಎಂದರು.

‘ಮಂಡಳಿಯು ಹಣ ವೆಚ್ಚ ಮಾಡಲು ರಾಜ್ಯಪಾಲರ ಅನುಮತಿ ಅಗತ್ಯವಿದೆ. ಕಳೆದ ಆಗಸ್ಟ್ 17ರಂದು ಅನುಮತಿ ಸಿಕ್ಕಿದೆ. ಈಗ ಹಣ ಬಿಡುಗಡೆ ಪ್ರಕ್ರಿಯೆ ನಡೆದಿದೆ’ ಎಂದೂ ಹೇಳಿದರು.

ADVERTISEMENT

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ 18 ತಾಲ್ಲೂಕುಗಳು ಆಗಿವೆ. ಅವುಗಳಿಗೆ ಮಿನಿ ವಿಧಾನಸೌಧ ಕಟ್ಟಡಗಳನ್ನು ನಿರ್ಮಿಸಲಾಗಿದೆ. ‘ಕಲ್ಯಾಣ ಪಥ’ ಎಂಬ ಹೊಸ ಯೋಜನೆ ಅನುಷ್ಠಾನಗೊಳ್ಳಬೇಕಿದೆ. ಈ ಯೋಜನೆಯಲ್ಲಿ ₹ 1 ಸಾವಿರ ಕೋಟಿ ವೆಚ್ಚದಲ್ಲಿ 30 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಬೇಕಿದೆ. ಎಲ್ಲ ಕಾಮಗಾರಿಗಳಿಗೆ ಹಿಂದಿನ ವರ್ಷಗಳ ಬಾಕಿ ಮತ್ತು ಪ್ರಸಕ್ತ ಸಾಲಿನ ಅನುದಾನವನ್ನು ಖರ್ಚು ಮಾಡಲಾಗುವುದು’ ಎಂದರು.

‘ಬಿಜೆಪಿಗರಿಗೆ ಅರ್ಹತೆ ನೈತಿಕತೆ ಇಲ್ಲ’

‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371ಜೆ ಸೆಕ್ಷನ್‌ ಅನ್ನು ತಿರಸ್ಕರಿಸಿದ್ದ ಬಿಜೆಪಿಯವರಿಗೆ ಈಗ ಆ ಭಾಗಕ್ಕೆ ಹಂಚಿಕೆಯಾದ ಅನುದಾನದ ಬಗ್ಗೆ ಮಾತನಾಡುವ ಅರ್ಹತೆಯೂ ಇಲ್ಲ ನೈತಿಕತೆಯೂ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕೆಕೆಆರ್‌ಡಿಬಿಗೆ ಅನುದಾನ ಬಿಡುಗಡೆ ಮಾಡದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ‘ಎಕ್ಸ್‌’ ಖಾತೆಯಲ್ಲಿ ಮಾಡಿದ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ‘ಈ ಭಾಗಕ್ಕೆ ಬಿಜೆಪಿ ದ್ರೋಹ ಬಗೆದಿದ್ದು ಐತಿಹಾಸಿಕ ಸತ್ಯ’ ಎಂದಿದ್ದಾರೆ. ‘ಹಿಂದುಳಿದ ಪ್ರದೇಶದ ಜನರ ಏಳಿಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು ನಮಗೆ ಪಾಠ ಮಾಡುವ ಅಗತ್ಯವಿಲ್ಲ. ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಸರ್ಕಾರ ಮಾಡಿದ ಲೂಟಿಯ ದ್ರೋಹದ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲ ಇಲಾಖೆಯಲ್ಲೂ ಎಲ್ಲ ವಿಷಯಗಳಲ್ಲೂ ಮೂಗು ತೂರಿಸುತ್ತೇನೆಂದು ಹೇಳುವ ಬಿಜೆಪಿಗರೇ ನನ್ನನ್ನು ಸರ್ಕಾರದ ವಕ್ತಾರನಾಗಿ ಮುಖ್ಯಮಂತ್ರಿ ನೇಮಿಸಿದ್ದಾರೆ. ನಿಮ್ಮ ಸುಳ್ಳುಗಳನ್ನು ಭೇದಿಸುವುದು ನನ್ನ ಜವಾಬ್ದಾರಿ’ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಮೌನವೇಕೆ: ಅಶೋಕ

ಬೆಂಗಳೂರು:‘ಖರ್ಗೆ ಕುಟುಂಬ ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲ ಎಂದು ಸವಾಲು ಹಾಕುತ್ತೀರಲ್ಲ ಅದರ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿ ಕಲ್ಯಾಣ ಕರ್ನಾಟಕಕ್ಕೆ ಸರ್ಕಾರದ ಅನುದಾನ ತಲುಪುವಂತೆ ಮಾಡಿ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕುಟುಕಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಕಲ್ಯಾಣಕ್ಕೆ ತಲುಪದ ಹಣ’ ವರದಿಯನ್ನು ಉಲ್ಲೇಖಿಸಿ ಅವರು ‘ಎಕ್ಸ್‌’ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕಲ್ಯಾಣ ಕರ್ನಾಟಕ ವಿರೋಧಿ ಸರ್ಕಾರ’ ಎಂದೂ ಟೀಕಿಸಿದ್ದಾರೆ. ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸಂಬಂಧ ಪಡದ ವಿಷಯಗಳಿಗೆಲ್ಲಾ ಅನವಶ್ಯವಾಗಿ ಮೂಗು ತೂರಿಸುವ ತಾವು ಕಲ್ಯಾಣ ಕರ್ನಾಟಕಕ್ಕೆ ಬರಬೇಕಾದ ಅನುದಾನದ ವಿಷಯದಲ್ಲಿ ಮೌನವಾಗಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರು. ಅವರ ಕೈಯಿಂದ ಮುಖ್ಯಮಂತ್ರಿಯವರಿಗೆ ಸೂಚನೆ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ. ಕಳೆದ ಸೆಪ್ಟೆಂಬರ್‌ನಲ್ಲಿ ಕಲಬುರಗಿಯಲ್ಲಿ ಸಂಪುಟ ಸಭೆ ಮಾಡಿ ಪುಂಖಾನುಪುಂಖವಾಗಿ ಘೋಷಣೆಗಳನ್ನು ಮಾಡಿದರಲ್ಲ ಅದು ಕೇವಲ ಒಂದು ದಿನದ ಜಾಹೀರಾತಿಗೆ ಸೀಮಿತವಾಯಿತಾ? ಅಥವಾ ಅವುಗಳನ್ನು ಕಾರ್ಯರೂಪಕ್ಕೆ ತರುವ ದೊಡ್ಡ ಮನಸ್ಸು ಮಾಡುತ್ತೀರಾ’ ಎಂದು ಅಶೋಕ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.