ಕಲಬುರಗಿ: ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ಹಲವೆಡೆ, ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಕೆಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ನೀರು ಬಿಡಲಾಗಿದ್ದು, ಇದರಿಂದ ಉಂಟಾದ ಪ್ರವಾಹದಲ್ಲಿ ಮಂಗಳವಾರ ಬೆಳಿಗ್ಗೆ ಕನಕಪುರ ಗ್ರಾಮದ ಎರಡು ಎತ್ತುಗಳು, ಒಂದು ಹಸು ಕೊಚ್ಚಿಕೊಂಡು ಹೋಗಿ ಮೃತಪಟ್ಟಿವೆ.
ರಾಯಚೂರು ನಗರ, ಜಿಲ್ಲೆಯ ಮಾನ್ವಿ, ಸಿಂಧನೂರು, ಕವಿತಾಳ ಸೇರಿದಂತೆ ಹಲವೆಡೆ ಮಧ್ಯಾಹ್ನ ಮಳೆಯಾಗಿದ್ದು, ಹೂವು, ಹಣ್ಣಿನ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಹಬ್ಬಕ್ಕೆ ಮಾರಲು ತಂದಿದ್ದ ಕುಂಬಳಕಾಯಿ, ಹೂವು, ಬಾಳೆದಿಂಡು ಹಾನಿಗೊಳಗಾದವು.
ಕೊಪ್ಪಳದಲ್ಲಿ ಸುಮಾರು ಅರ್ಧಗಂಟೆ ಸುರಿದ ಬಿರುಸಿನ ಮಳೆಯಾಗಿದ್ದು, ನೆನೆದುಕೊಂಡೇ ದೀಪಾವಳಿ ಹಬ್ಬದ ಸಾಮಗ್ರಿಗಳನ್ನು ವ್ಯಾಪಾರಿಗಳು ಮಾರಾಟ ಮಾಡಿದರು.
ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದೆ. ಗುರುಮಠಕಲ್, ಸುರಪುರ, ಶಹಾಪುರ ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ.
ಹುಬ್ಬಳ್ಳಿ ವರದಿ: ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಗುಡುಗು, ಸಹಿತ ಮಳೆಯಾಯಿತು. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯವರೆಗೂ ಮುಂದುವರಿಯಿತು. ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣ ಸೇರಿ ಹೋಬಳಿಯಾದ್ಯಂತ ಗುಡುಗು ಸಹಿತ ಧಾರಾಕಾರವಾಗಿ ಮಳೆಯಾಗಿದೆ.
ತೆಕ್ಕಲಕೋಟೆ, ಕರೂರು ಹೋಬಳಿ ವ್ಯಾಪ್ತಿಯ ಭೈರಾಪುರ, ದರೂರು, ಬಲಕುಂದಿ, ಉಪ್ಪಾರ ಹೊಸಳ್ಳಿ, ಹಳೇಕೋಟೆ ಗ್ರಾಮದ ಭತ್ತದ ಬೆಳೆ ನೆಲಕಚ್ಚಿದೆ.
ಉತ್ತರ ಕನ್ನಡದ ಕಾರವಾರ, ಹೊನ್ನಾವರ ಹಾಗೂ ಬೆಳಗಾವಿಯಲ್ಲಿ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಮಂಗಳವಾರ ಧಾರಾಕಾರ ಮಳೆ ಸುರಿಯಿತು. ಕಡೂರು ತಾಲ್ಲೂಕಿನ ತುರುವನಹಳ್ಳಿಯಲ್ಲಿ ಎತ್ತಿನಗಾಡಿ ಕೊಚ್ಚಿ ಹೋಗಿ, ಎತ್ತುಗಳು ಮೃತಪಟ್ಟಿವೆ.
ಕಡೂರು, ತರೀಕೆರೆ ಸೇರಿ ಬಯಲು ಸೀಮೆಯಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ವೇದಾನದಿ ತುಂಬಿ ಹರಿಯುತ್ತಿದ್ದು, ಎಸ್.ಮಾದಾಪುರದ ಕೆರೆ ತುಂಬಿ ಕೋಡಿ ಬಿದ್ದಿದೆ.
ಹುಲ್ಲೇಹಳ್ಳಿಯ ರೈತ ಲಕ್ಷ್ಮಣ ಅಡಿಕೆ ಸಸಿ ಖರೀದಿಸಲು ಕಡೂರಿಗೆ ಹೊರಟಿದ್ದು, ಮಣ್ಣುಹೊಳೆ ರಸ್ತೆಯಲ್ಲಿ ಹಳ್ಳದ ಸೆಳವಿಗೆ ಗಾಡಿ, ಎತ್ತುಗಳು ಕೊಚ್ಚಿಹೋಗಿವೆ. ಸಮೀಪದ ತೋಟದಲ್ಲಿ ಎತ್ತುಗಳ ಕಳೇಬರ ಪತ್ತೆಯಾಗಿದ್ದು, ಗಾಡಿ ಸಿಕ್ಕಿಲ್ಲ. ಲಕ್ಷ್ಮಣ ಈಜಿ ಪಾರಾಗಿದ್ದು, ಅವರ ಮಾಹಿತಿ ಆಧರಿಸಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಳೇಬರ ಪತ್ತೆಮಾಡಿದ್ದಾರೆ.
ಕುಂತಿಹೊಳೆ ಮೈದುಂಬಿ ಹರಿಯುತ್ತಿದೆ. ಬೀರೂರು ಮುದ್ದಾಪುರ ಎರೆ ಬಯಲಿನಲ್ಲಿ ಕೊಯಿಲು ಮಾಡಿದ್ದ ಈರುಳ್ಳಿ ಬೆಳೆ ಕೊಳೆಯುವ ಭೀತಿ ಉಂಟಾಗಿದೆ. ತರೀಕೆರೆ ತಾಲ್ಲೂಕಿನಲ್ಲೂ ಹಲವು ಕೆರೆಗಳು ಕೋಡಿ ಬಿದ್ದಿವೆ.
ಮಂಗಳೂರು ನಗರ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಸಿಡಿಲು ಸಹಿತ ಬಿರುಸಿನ ಮಳೆಯಾಗಿದೆ. ಬ್ರಹ್ಮಾವರ, ಉಡುಪಿ ನಗರ ಮತ್ತು ಜಿಲ್ಲೆಯ ಕಾಪು, ಪಡುಬಿದ್ರಿ ವ್ಯಾಪ್ತಿಯಲ್ಲೂ ಗುಡುಗು ಸಹಿತ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.