ADVERTISEMENT

ಕನ್ನಡ ಅವಹೇಳನ: ಕಮಲ್‌ಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 16:09 IST
Last Updated 4 ಜುಲೈ 2025, 16:09 IST
ಕಮಲ್‌ ಹಾಸನ್‌
ಕಮಲ್‌ ಹಾಸನ್‌   

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ನಟ ಕಮಲಹಾಸನ್ ಅವರಿಗೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ಈ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಅಸಲು ದಾವೆಯನ್ನು ಶುಕ್ರವಾರ ವಿಚಾರಣೆ ನಡೆಸಿದ 31ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ಈ ಕುರಿತಂತೆ ಏಕಪಕ್ಷೀಯ ಆದೇಶ ಹೊರಡಿಸಿದ್ದಾರೆ.

‘ಕನ್ನಡ ಭಾಷೆಯ ಮೇಲೆ ಭಾಷಾಶಾಸ್ತ್ರಜ್ಞರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಪೋಸ್ಟ್ ಮಾಡುವುದು, ನೀಡುವುದು, ಬರೆಯುವುದು, ಪ್ರಕಟಿಸುವುದು ಅಥವಾ ವಿತರಿಸುವುದನ್ನು ನಿರ್ಬಂಧಿಸಲಾಗಿದೆ’ ಎಂದು ಆದೇಶಿಸಿರುವ ನ್ಯಾಯಾಧೀಶರು ಪ್ರತಿವಾದಿ ಕಮಲ್‌ಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿದ್ದಾರೆ.

ADVERTISEMENT

‘ಪ್ರತಿವಾದಿ ಅಥವಾ ಅವರ ಏಜೆಂಟರು, ನಿಯೋಜಕರು, ಪ್ರತಿನಿಧಿಗಳು ಅಥವಾ ಅವರ ಅಡಿಯಲ್ಲಿ ಅಥವಾ ಅವರ ಮೂಲಕ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗಳಿಗೆ ಈ ತಾತ್ಕಾಲಿಕ ನಿರ್ಬಂಧಕಾಜ್ಞೆ ಅನ್ವಯವಾಗುತ್ತದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ವಾದಿಯ ಪರ ಹೈಕೋರ್ಟ್‌ ವಕೀಲ ಚಿಂತನ್‌ ಚಿನ್ನಪ್ಪ ವಾದ ಮಂಡಿಸಿದರು. ವಿಚಾರಣೆಯನ್ನು ಆಗಸ್ಟ್‌ 30ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.