ADVERTISEMENT

ನೂತನ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ; ಭಾವುಕರಾದ ಭಾಸ್ಕರ್ ರಾವ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 9:56 IST
Last Updated 1 ಆಗಸ್ಟ್ 2020, 9:56 IST
ನಿರ್ಗಮಿತ ಕಮಿಷನರ್ ಭಾಸ್ಕರ್ ರಾವ್  ಅವರು ಕಮಲ್ ಪಂತ್ ಅವರಿಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದರು.
ನಿರ್ಗಮಿತ ಕಮಿಷನರ್ ಭಾಸ್ಕರ್ ರಾವ್  ಅವರು ಕಮಲ್ ಪಂತ್ ಅವರಿಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದರು.   
""

ಬೆಂಗಳೂರು: ನಗರದ ನೂತನ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ್ದಾರೆ. ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ನಿರ್ಗಮಿತ ಕಮಿಷನರ್ ಭಾಸ್ಕರ್ ರಾವ್ ಅವರು ಕಮಲ್ ಪಂತ್ ಅವರಿಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರ ಮಾಡಿದರು.

ಕಮಲ್ ಪಂತ್ 1990ರ ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ. ಅಧಿಕಾರ ಸ್ವೀಕರಿಸಿದ ನೂತನ ಕಮಿಷನರ್ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು, 'ಇವತ್ತು ನಾನು ಬೆಂಗಳೂರು ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರ ನನಗೆ ಹೆಮ್ಮೆಯ ಕೆಲಸ‌ ನೀಡಿದೆ. ಸರ್ಕಾರ ನೀಡಿರುವ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಬೆಂಗಳೂರು ಪೊಲೀಸರು ಕೋವಿಡ್ ಸಮಯದಲ್ಲಿ ಅದ್ಭುತ ಕಾರ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ತಮ್ಮ ಜೀವ ನೀಡಿದ್ದಾರೆ. ಅವರಿಗೆ ಗೌರವ ಸಲ್ಲಿಸುತ್ತೇನೆ' ಎಂದರು.

ADVERTISEMENT

'ಕೆಲವು ಪೊಲೀಸರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಬೇಗ ಗುಣಮುಖರಾಗಲಿ ‌ಎಂದು ಹಾರೈಸುತ್ತೆನೆ. ಇನ್ನು ಈ ಹಿಂದೆ ಕಮಿಷನರ್ ಹುದ್ದೆ ನಿರ್ವಹಿಸಿದ ಹಿರಿಯ ಅಧಿಕಾರಿಗಳಂತೆ ನಾನು ಈ ಹುದ್ದೆಯನ್ನು ದಕ್ಷತೆಯಿಂದ ನಿರ್ವಹಿಸುತ್ತೆೇನೆ. ಉತ್ತಮ ಪೊಲೀಸಿಂಗ್ ನೀಡಲು ಬೆಂಗಳೂರು‌ ನಾಗರಿಕರ ಸಹಕಾರ ಕೇಳುತ್ತೇನೆ. ತಿಂಗಳಿಗೊಮ್ಮೆ ನಾನು ಡಿಸಿಪಿಗಳ ಕಚೇರಿಗೆ ಭೇಟಿ ನೀಡುತ್ತೇನೆ. ದಿನ ಪೂರ್ತಿ ಆಯಾ ವಿಭಾಗದಲ್ಲಿ ನಡೆದ ತಿಂಗಳ ಅಪರಾಧಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ . ಇಂದು ಜವಾಬ್ದಾರಿ ತೆಗೆದುಕೊಂಡಿದ್ದೀನಿ. ಎಲ್ಲರ ಜತೆ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮ ನಿರ್ಣಯ ತೆಗೆದುಕೊಳುತ್ತೇನೆ. ಈಗಾಗಲೇ ಹಿಂದೆ ಇದ್ದ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಅದನ್ನು ನಾನು ಮುಂದುವರೆಸುತ್ತೇನೆ' ಎಂದೂ ಅವರು ಹೇಳಿದರು.

ನಿರ್ಗಮನ ಸಂದರ್ಭದಲ್ಲಿ ಭಾಸ್ಕರ್ ರಾವ್ ಭಾವುಕರಾದರು. ಭಾಸ್ಕರ್ ರಾವ್ ಕಣ್ಣೀರು ಹಾಕಿ ಕಮಿಷನರ್ ಕಚೇರಿಯಿಂದ ಹೊರ ನಡೆದರು. ದಿಢೀರ್ ವರ್ಗಾವಣೆ ಅವರಿಗೆ ನೋವು ತರಿಸಿದೆ ಎಂದು ಆಪ್ತರೊಬ್ಬರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.