ADVERTISEMENT

ನಾನು ಚನ್ನಾಗಿದ್ದೇನೆ, ಯಾರೂ ಗಾಭರಿಪಡಬೇಕಿಲ್ಲ: ಕಾಮೇಗೌಡರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:53 IST
Last Updated 25 ಜುಲೈ 2020, 12:53 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಮನೆ ಕಾಮೇಗೌಡರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಮನೆ ಕಾಮೇಗೌಡರು    

ಮಂಡ್ಯ: ನಾನು ಚನ್ನಾಗಿದ್ದೇನೆ. ವೈದ್ಯರೂ ನನ್ನನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿದ್ದಾರೆ. ಯಾರೂ ಗಾಭರಿಪಡಬೇಕಿಲ್ಲ ಎಂದು ಕೆರೆ ಕಾಯಕಲ್ಪದ ಕಲ್ಮನೆ ಕಾಮೇಗೌಡರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ ಕಾಮೇಗೌಡರಿಗೆ ಕೋವಿಡ್‌ ಇರುವುದೂ ದೃಡವಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ಶನಿವಾರ ಬೆಳಗ್ಗೆ ಟ್ವೀಟ್‌ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಕಲ್ಮನೆ ಕಾಮೇಗೌಡರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಆಗ್ರಹಿಸಿದ್ದರು. ಇದರ ಬೆನ್ನಿಗೇ, ಕಾಮೇಗೌಡರು ತಾವು ಚನ್ನಾಗಿರುವುದಾಗಿ ಹೇಳಿರುವ ವಿಡಿಯೊ ಬಿಡುಗಡೆಯಾಗಿದೆ.

ಏನು ಹೇಳಿದ್ದಾರೆ ಕಾಮೇಗೌಡರು?

ADVERTISEMENT

‘ನನ್ನನ್ನು ವೈದ್ಯರು ಚನ್ನಾಗಿ ಆರೈಕೆ ಮಾಡುತ್ತಿದ್ದಾರೆ. ಗಾಯಕ್ಕೆ ಡ್ರೆಸಿಂಗ್‌ ಮಾಡುತ್ತಿದ್ದಾರೆ. ಉತ್ತಮ ಆಹಾರ ಕೊಡುತ್ತಿದ್ದಾರೆ. ಔಷಧ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಶೌಚಾಲಯಕ್ಕೆ ತೆರಳಲು ಸಹಾಯಕರನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಯಾರೂ ಗಾಭರಿಪಡುವ ಅಗತ್ಯವಿಲ್ಲ. ಕಾಲಿನ ಗಾಯವೊಂದನ್ನು ಬಿಟ್ಟು ನನಗೇನೂ ಇಲ್ಲ. ನಾನು ಚನ್ನಾಗಿಯೇ ಇದ್ದೇನೆ,’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಕಲ್ಮನೆ ಕಾಮೇಗೌಡರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರೂ ಹೇಳಿದ್ದಾರೆ.

ಸೂಕ್ತ ಚಿಕಿತ್ಸೆ ಕೊಡಿಸಲು ಆಗ್ರಹಿಸಿದ್ದ ಎಚ್‌ಡಿಕೆ

‘ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರ್ಕಾರ ತುರ್ತು ಅವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತೇನೆ,’ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದರು.

ಅಲ್ಲದೆ, ‘ಮನ್ ಕಿ ಬಾತ್ ನಲ್ಲಿ ಕೂಡ ಪ್ರಧಾನಿಯವರು ಕೊಂಡಾಡಿದ್ದಾರೆ. ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಗಳಿ ಹೊನ್ನಶೂಲಕ್ಕೆ ಏರಿಸಿದರೆ ಸಾಲದು. ಅನಾರೋಗ್ಯದಿಂದ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕಿದೆ,’ ಎಂದೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.