ADVERTISEMENT

ಶಾಸಕ ಗಣೇಶ್‌ ಪತ್ತೆಗೆ ಶೋಧ ತೀವ್ರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:15 IST
Last Updated 23 ಜನವರಿ 2019, 20:15 IST
   

ಬೆಂಗಳೂರು/ ರಾಮನಗರ: ಬಿಡದಿ ಈಗಲ್ಟನ್ ರೆಸಾರ್ಟ್‌ನಲ್ಲಿ ವಿಜಯನಗರ (ಹೊಸಪೇಟೆ) ಶಾಸಕ ಆನಂದ್‌ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್ ಬಂಧನಕ್ಕೆ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

ರಾಮನಗರ ಗ್ರಾಮೀಣ ಸರ್ಕಲ್‌ ಇನ್‌ಸ್ಪೆಕ್ಟರ್‌ ಜೀವನ್‌ ನೇತೃತ್ವದ ತಂಡ ಬೆಂಗಳೂರಿನಲ್ಲಿ ಆರೋಪಿಗಾಗಿ ಹುಡುಕಾಡುತ್ತಿದೆ. ಇನ್ನೆರಡು ತಂಡಗಳು ಬಳ್ಳಾರಿ, ಮೈಸೂರು ಮತ್ತಿತರ ಕಡೆಗಳಲ್ಲಿ ಶೋಧ ನಡೆಸಿವೆ. ಆರೋಪಿ ಹೈದರಾಬಾದ್‌ ಕಡೆಗೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಶಾಸಕರ ಆಪ್ತರ ಮೂಲಕ ಸಂಪರ್ಕಿಸುವ ಯತ್ನ ನಡೆದಿದೆ.

ಬಿಡದಿ ಎಸ್‌ಐ ಹರೀಶ್ ನೇತೃತ್ವದ ತಂಡವು ಈಗಲ್ಟನ್‌ ರೆಸಾರ್ಟ್‌ನಲ್ಲಿ ಸ್ಥಳ ಮಹಜರು ನಡೆಸಿದ್ದು, ಸಾಕ್ಷ್ಯಗಳಿಗಾಗಿ ಜಾಲಾಡಿದೆ. ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದೆ. ಹಲ್ಲೆ ನಡೆಸಲು ಬಳಸಿದ್ದರು ಎನ್ನಲಾದ ದೊಣ್ಣೆ, ಹೂಕುಂಡ ಮೊದಲಾದವುಗಳಿಗಾಗಿ ಹುಡುಕಾಟ ನಡೆಸಿದೆ. ರೆಸಾರ್ಟಿನ ವ್ಯವಸ್ಥಾಪಕರು ಹಾಗೂ ಘಟನೆ ಸಂದರ್ಭದಲ್ಲಿ ಹಾಜರಿದ್ದ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ADVERTISEMENT

ಕೊಲೆ ಯತ್ನ ದಾಖಲಾಗುತ್ತಿದ್ದಂತೆ ಗಣೇಶ್ ನಾಪತ್ತೆಯಾಗಿದ್ದು, ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ನಿರೀಕ್ಷಣಾ ಜಾಮೀನು ಪಡೆಯಲು ಗಣೇಶ್ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದಿರುವ ಆನಂದ್‌ ಸಿಂಗ್, ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು ಎನ್ನುವ ಕಾರಣಕ್ಕೆ ಗಣೇಶ್ ಬಂಧನದವರೆಗೆ ಆಸ್ಪತ್ರೆಯಲ್ಲೇ ಉಳಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.

‘ಗಣೇಶ್‌ ತಲೆಮರೆಸಿಕೊಂಡಿದ್ದು, ಆದಷ್ಟು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಗಣೇಶ್‌ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡ, ರಾಜಕೀಯ ಹಸ್ತಕ್ಷೇಪ ಇಲ್ಲ. ಅವರ ಬಂಧನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ’ ಎಂದೂ ಪಾಟೀಲ ಸ್ಪಷ್ಟಪಡಿಸಿದರು.

ತೀವ್ರ ಮುಜುಗರವಾಗಿದೆ: ‘ಸರ್ಕಾರದಲ್ಲಿ ನಾವು ಪಾಲುದಾರರು. ಹೀಗಾಗಿ, ಕಂಪ್ಲಿ ಗಣೇಶ್ ಪ್ರಕರಣದಿಂದ ನಮಗೂ ತೀವ್ರ ಮುಜುಗರವಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಹೇಳಿದರು.

‘ಇಂದಿರಾಗಾಂಧಿ ಅವರನ್ನೇ ಬಂಧಿಸಲಾಗಿತ್ತು. ಇನ್ನು ಗಣೇಶ್ ಯಾವ ಲೆಕ್ಕ’ ಎಂದರು. ‘ಜನಪ್ರತಿನಿಧಿಗಳು ಹೊಡೆದಾಡುವ ಮಟ್ಟಕ್ಕೆ ಹೋಗಬಾರದು. ಕರ್ನಾಟಕ ಬಿಹಾರ ಆಗುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ರಾಷ್ಟ್ರೀಯ ಪಕ್ಷದ ಶಾಸಕರೇ ಹೊಡೆದಾಡಿಕೊಂಡಿದ್ದಾರೆ’ ಎಂದರು.

ಎರಡು ತಾಸು ಗಲಾಟೆ: ರಾಮಪ್ಪ

ದಾವಣಗೆರೆ: ‘ಆನಂದ್‌ ಸಿಂಗ್‌ ಮತ್ತು ಗಣೇಶ್‌ ಎರಡು ತಾಸು ಗಲಾಟೆ ಮಾಡಿಕೊಂಡಿದ್ದರು’ ಎಂದು ಹರಿಹರ ಶಾಸಕ ಎಸ್‌. ರಾಮಪ್ಪ ಹೇಳಿದ್ದಾರೆ.

‘ಆನಂದ್‌ ಸಿಂಗ್‌ ಕೊಠಡಿ ಹತ್ತಿರವೇ ನನಗೂ ರೂಂ ಕೊಟ್ಟಿದ್ದರು. ರಾತ್ರಿ ಮೂರು ಗಂಟೆ ಹೊತ್ತಿಗೆ ಜೋರಾಗಿ ಕೂಗಾಡುವ ಸದ್ದು ಕೇಳಿತು. ಏನೋ ಮಾತನಾಡಿಕೊಳ್ಳುತ್ತಿರಬಹುದು ಎಂದು ಸುಮ್ಮನಾದೆ. ಆದರೆ, ಭಾನುವಾರ ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಗಲಾಟೆ ಜೋರಾಯಿತು. ಈ ವೇಳೆ ಚಳ್ಳಕೆರೆ ಶಾಸಕ ರಘುಮೂರ್ತಿ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರೂ ಬಂದರು. ನಾವು ಜಗಳ ಬಿಡಿಸಿದೆವು’ ಎಂದು ರಾಮಪ್ಪ ತಿಳಿಸಿದರು.

‘ಗಣೇಶ್‌ ಜೋರಾಗಿ ಕೂಗಾಡುತ್ತಿದ್ದರು. ಅವರು ಕೈಯಿಂದಲೇ ಆನಂದ್‌ ಸಿಂಗ್‌ ಮೇಲೆ ಹಲ್ಲೆ ಮಾಡಿರಬೇಕು. ಗಾಯಗೊಂಡ ಆನಂದ್‌ ಸಿಂಗ್‌ ಆಸ್ಪತ್ರೆಗೆ ಹೋದರು. ಮಾರನೇ ದಿನ ನಾವು ಕೊಠಡಿ ಖಾಲಿ ಮಾಡುವವರೆಗೆ ಗಣೇಶ್‌ ರೆಸಾರ್ಟ್‌ನಲ್ಲೇ ಇದ್ದರು’ ಎಂದು ಪ್ರತ್ಯಕ್ಷದರ್ಶಿ ರಾಮಪ್ಪ ಮಾಹಿತಿ ನೀಡಿದರು.

‘ವೈಯಕ್ತಿಕ ನೆಲೆಯಲ್ಲಿ ಪರಿಶೀಲನೆ’

ಬೆಂಗಳೂರು: ಆನಂದ್‌ ಸಿಂಗ್‌ ಮೇಲೆ ಗಣೇಶ್ ಹಲ್ಲೆ ನಡೆಸಿರುವ ಪ್ರಕರಣವನ್ನು ವೈಯಕ್ತಿಕ ನೆಲೆಯಲ್ಲಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ‌

‘ಸಾಂವಿಧಾನಿಕ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಒಬ್ಬರನ್ನೊಬ್ಬರು ತುಳಿಯಲು ಮುಂದಾಗಿರುವುದು ಸರಿಯಲ್ಲ. ಈ ಭಿನ್ನಾಭಿಪ್ರಾಯ ಅವರ ಪಕ್ಷದೊಳಗಿನ ವಿಚಾರಕ್ಕೆ ಸಂಬಂಧಿಸಿದೆ. ಆದರೂ ಈ ಬಗ್ಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ. ಆನಂದ್‌ ಸಿಂಗ್‌ ಅವರನ್ನೂ ಭೇಟಿಯಾಗುತ್ತೇನೆ. ನನ್ನದೇ ಆದ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದರು.

ಇಂಥ ಕೀಳುಮಟ್ಟದ ಘಟನೆ ನೋಡಿಲ್ಲ: ಪರಮೇಶ್ವರ

‘ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಕೀಳು ಘಟನೆ ನೋಡಿಲ್ಲ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.

‘ನಾವೇ ಆದರ್ಶ ಪಾಲಿಸದಿದ್ದರೆ ಹೇಗೆ. ಯುವಕರಿಗೆ ನಾವು ಏನು ಹೇಳಬೇಕು. ಗಣೇಶ್ ಕೂಡ ಯುವಕನೇ. ಆದರೆ, ಹೀಗೆ ಮಾಡಿದ್ದಾರೆ’ ಎಂದು ನೊಂದು ನುಡಿದರು.

ಆನಂದ್‌ ಸಿಂಗ್‌ ಎದೆ ಮೂಳೆ ಮುರಿತ

ಬೆಂಗಳೂರು: ‘ನನ್ನ ತಂದೆಯ ಎದೆ ಮೂಳೆ ಮುರಿದು ಹೋಗಿದೆ. ಬಲಗಣ್ಣಿನ ಕೆಳಗೂ ಪಟ್ಟು ಬಿದ್ದಿದೆ’ ಎಂದು ಆನಂದ್‌ಸಿಂಗ್ ಅವರ ಪುತ್ರ ಸಿದ್ದಾರ್ಥ ಹೇಳಿದರು.

‘ಕೆಮ್ಮಿದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಇನ್ನೂ ನಾಲ್ಕೈದು ದಿನಗಳು ಚಿಕಿತ್ಸೆ ಬೇಕಾಗುತ್ತದೆ. ಅವರು ನಡೆದುಕೊಂಡು ಹೋದರೆ, ವಾಂತಿ ಬಂದ ಹಾಗೆ ಆಗುತ್ತದೆ ಮತ್ತು ತಲೆ ಸುತ್ತಿ ಬರುತ್ತಿದೆ’ ಎಂದು ತಿಳಿಸಿದರು.

‘ಈಗ ಕೇವಲ ದ್ರವಾಹಾರ ಸೇವಿಸುತ್ತಿದ್ದಾರೆ. ಕಣ್ಣಿನ ಊತ ಕಡಿಮೆ ಆದ ಬಳಿಕ ಮುಂದಿನ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ’ ಎಂದರು.

‘ಹಲ್ಲೆ ನಡೆಸಿದ ಶಾಸಕ ಗಣೇಶ್‌ ನಮ್ಮ ಕುಟುಂಬದ ಸದಸ್ಯರನ್ನು ಸಂಪರ್ಕಿಸಲಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ವಿಷಯ ನನಗೆ ಗೊತ್ತಿಲ್ಲ’ ಎಂದೂ ಸಿದ್ದಾರ್ಥ ಹೇಳಿದರು.

ಆಸ್ಪತ್ರೆಗೆ ರೆಡ್ಡಿ, ಸಿ.ಟಿ. ರವಿ ಭೇಟಿ

ಅಪೋಲೊ ಆಸ್ಪತ್ರೆಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬುಧವಾರ ಭೇಟಿ ನೀಡಿ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದರು. ರೆಡ್ಡಿ ಭೇಟಿ ನೀಡಿದ ಬಿಜೆಪಿ ಶಾಸಕ ಸಿ.ಟಿ.ರವಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ರೆಡ್ಡಿ, ‘ಶಾಸಕರ ಮಾರಾಮಾರಿ ಪ್ರಕರಣಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರೋಕ್ಷ ಕಾರಣ ಎಂದು ಆರೋಪಿಸಿದರು. ಆನಂದ್ ಸಿಂಗ್ ಕಾಂಗ್ರೆಸ್‌ಗೆ ಹೋಗಿದ್ದೆ ದುರದೃಷ್ಟಕರ ಎಂದರು.

‘ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಾಗಿವೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ನಡುವಿನ ವೈಷಮ್ಯಕ್ಕೆ ಶಾಸಕರು ಬಲಿಯಾಗುತ್ತಿದ್ದಾರೆ. ಬಳ್ಳಾರಿ ಶಾಸಕರ ಒಗ್ಗಟ್ಟು ಒಡೆಯುತ್ತಿದ್ದಾರೆ’ ಎಂದರು.

* ಗಣೇಶ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆರೋಪಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಈ ಹಿಂದೆ ಗಣೇಶ್ ರೌಡಿಶೀಟರ್ ಆಗಿದ್ದರೆ ಮತ್ತೆ ಅವರ ವಿರುದ್ಧ ರೌಡಿಶೀಟರ್ ತೆರೆಯುವ ಬಗ್ಗೆಯೂ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗುವುದು
- ಎಂ.ಬಿ. ಪಾಟೀಲ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.