ರನ್ಯಾ ರಾವ್
ಬೆಂಗಳೂರು: ದುಬೈನಿಂದ 1 ಕೆ.ಜಿ.ಯಷ್ಟು ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮೂಲಕ ತರಿಸಿಕೊಳ್ಳುವವರಿಗೆ, ಕನಿಷ್ಠ ₹12 ಲಕ್ಷದಷ್ಟು ಲಾಭವಾಗುತ್ತದೆ. ಹೀಗಾಗಿಯೇ, ಈ ದಂಧೆ ವ್ಯವಸ್ಥಿತ ಉದ್ಯಮದ ರೂಪ ಪಡೆದುಕೊಂಡಿದೆ ಎಂಬ ಅಂಶವನ್ನು ನಟಿ ರನ್ಯಾ ರಾವ್ ಪ್ರಕರಣದ ತನಿಖೆಯು ತೆರೆದಿಡುತ್ತಿದೆ.
ರನ್ಯಾ 14.2 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಕಳ್ಳಸಾಗಣೆ ಮಾಡಿದ್ದು ಒಂದು ಪ್ರಕರಣವಾದರೆ, ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಇನ್ನೂ ಮೂರು ಪ್ರಕರಣಗಳನ್ನು ಒಟ್ಟುಗೂಡಿಸಿ ತನಿಖೆ ನಡೆಸುತ್ತಿವೆ. ಈ ಪ್ರಕರಣಗಳಿಂದ ದೇಶಕ್ಕಾದ ತೆರಿಗೆ ನಷ್ಟದ ಅಂದಾಜನ್ನು ಡಿಆರ್‌ಐ ಮಾಡುತ್ತಿದ್ದರೆ, ಕಳ್ಳಸಾಗಣೆಯಿಂದಾಗುವ ಲಾಭದ ಪ್ರಮಾಣ ಎಷ್ಟು ಎಂದು ಸಿಬಿಐ ಲೆಕ್ಕ ಹಾಕುತ್ತಿದೆ.
‘1 ಕೆ.ಜಿ.ಯಷ್ಟು ಚಿನ್ನವನ್ನು ಆಮದು ಮಾಡಿಕೊಂಡಾಗ ಅಂದಿನ ಬೆಲೆಯನ್ನು ಆಧರಿಸಿ ₹5 ಲಕ್ಷದಿಂದ ₹5.15 ಲಕ್ಷದವರೆಗೂ ಆಮದು ಸುಂಕ ಕಟ್ಟಬೇಕಾಗುತ್ತದೆ. ಇನ್ನು ಹೀಗೆ ಕಳ್ಳಸಾಗಣೆ ಮಾಡಿಕೊಂಡ ಚಿನ್ನವು 25 ಕ್ಯಾರೆಟ್ ಅಥವಾ ಶೇ 99.98ರಷ್ಟು ಪರಿಶುದ್ಧ ಚಿನ್ನ. ಇದನ್ನು 22 ಕ್ಯಾರೆಟ್‌ಗೆ ಪರಿವರ್ತಿಸಿದಾಗ (ಶೇ 91.6ರಷ್ಟು ಪರಿಶುದ್ಧತೆ) ಪ್ರತಿ ಕೆ.ಜಿ.ಯಲ್ಲಿ 83 ಗ್ರಾಂಗಳಷ್ಟು ಉಳಿಯುತ್ತದೆ’ ಎಂಬುದು ತನಿಖಾಧಿಕಾರಿಗಳ ಲೆಕ್ಕಾಚಾರ.
‘ಸುಂಕ ತಪ್ಪಿಸಿದ್ದರಿಂದ ₹5 ಲಕ್ಷ ಉಳಿದರೆ, 22 ಕ್ಯಾರೆಟ್‌ಗೆ ಪರಿವರ್ತಿಸಿದ್ದರಿಂದ ಉಳಿತಾಯವಾದ ಚಿನ್ನದ ಮೌಲ್ಯ ಸುಮಾರು ₹7 ಲಕ್ಷದಷ್ಟು ಆಗುತ್ತದೆ. ಹೀಗೆ ಒಟ್ಟು ₹12 ಲಕ್ಷ ಉಳಿತಾಯವಾಗುತ್ತದೆ. 10 ಕೆ.ಜಿಯಷ್ಟು ಚಿನ್ನವನ್ನು ತಂದರೆ, ತರಿಸಿಕೊಂಡವರಿಗೆ ₹1.20 ಕೋಟಿಯಷ್ಟು ಉಳಿತಾಯವಾಗುತ್ತದೆ’ ಎಂದು ಅಂದಾಜಿಸಲಾಗಿದೆ.
‘ರನ್ಯಾ ಪ್ರಕರಣದ ಒಟ್ಟಿಗೇ ತನಿಖೆಗೆ ಗುರಿಯಾಗಿರುವ ಮುಂಬೈ ಕಳ್ಳಸಾಗಣೆ ಪ್ರಕರಣಗಳಲ್ಲಿ, ಕೆಲ ಚಿನ್ನದ ವ್ಯಾಪಾರಿಗಳನ್ನು ಸಿಬಿಐ ಮತ್ತು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕಳ್ಳಸಾಗಣೆಯ ಚಿನ್ನಕ್ಕೆ ಜಿಎಸ್‌ಟಿ ಕಟ್ಟಬೇಕಿಲ್ಲದಿರುವುದರಿಂದ ಪ್ರತಿ ಕೆ.ಜಿ ಮೇಲೆ ಇನ್ನೂ ₹3 ಲಕ್ಷದಷ್ಟು ಉಳಿಯುತ್ತದೆ. ಚಿನ್ನ ಕಳ್ಳಸಾಗಣೆ ಮಾಡುವವರ ವೆಚ್ಚಕ್ಕೆ ಇದು ಸರಿಹೊಂದುತ್ತದೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಶಿಷ್ಟಾಚಾರ ಸಿಬ್ಬಂದಿಗೆ ನೋಟಿಸ್ ಜಾರಿ
ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿಯಮಗಳಡಿ ಗಣ್ಯರಿಗೆ ಒದಗಿಸಲಾಗುವ ಸೌಲಭ್ಯ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಅವರು ಶಿಷ್ಟಾಚಾರ ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಹೆಡ್‌ಕಾನ್‌ಸ್ಟೆಬಲ್ ಬಸವರಾಜು, ವಿಮಾನ ನಿಲ್ದಾಣ ಗುಪ್ತದಳ ವಿಭಾಗದ ಕಾನ್‌ಸ್ಟೆಬಲ್ ಧನುಷ್ ಹಾಗೂ ವೆಂಕಟೇಶ್, ಮಹಾಂತೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜು ಅವರ ವಿಚಾರಣೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ, ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
‘ರನ್ಯಾ ರಾವ್ ಅವರು ದುಬೈನಿಂದ ಕರೆ ಮಾಡಿ ಶಿಷ್ಟಾಚಾರ ಪ್ರಕಾರ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಕುಟುಂಬದವರು ಯಾರೇ ಬಂದರೂ ಶಿಷ್ಟಾಚಾರ ನೀಡುವಂತೆ ಡಿಜಿಪಿ ರಾಮಚಂದ್ರರಾವ್ ಅವರ ಸೂಚನೆ ಇತ್ತು. ಹೀಗಾಗಿ ರನ್ಯಾ ಅವರನ್ನು ಶಿಷ್ಟಾಚಾರ ಪ್ರಕಾರ ಕರೆದುಕೊಂಡು ಬರಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ’ ಎಂದು ಬಸವರಾಜು ಹೇಳಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿರುವ ಗೌರವ್ ಗುಪ್ತ ನೇತೃತ್ವತ ತಂಡ, ರನ್ಯಾ ದುಬೈಗೆ ಹೊರಟ ದಿನ ಮತ್ತು ವಾಪಸ್ ಆದ ದಿನದ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದೆ.
ಮಾರ್ಚ್ 3ರಂದು ರನ್ಯಾ ಅವರನ್ನು ಕರೆದೊಯ್ಯಲು ಖಾಸಗಿ ವಾಹನ ಬಂದಿತ್ತು. ನಟಿಯ ಬಂಧನ ಬಳಿಕ ಕಾರಿನ ಚಾಲಕ ಸಂಪರ್ಕಕ್ಕೆ ಸಿಕ್ಕಿಲ್ಲ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಚಾಲಕನಿಗೆ ಚಿನ್ನ ಕಳ್ಳಸಾಗಣೆ ಬಗ್ಗೆ ಮಾಹಿತಿ ಇರಬೇಕು ಅಥವಾ ಚಿನ್ನ ಕಳ್ಳಸಾಗಣೆದಾರರೇ ವಾಹನ ಕಳುಹಿಸಿರಬೇಕು. ಅಲ್ಲದೇ ಈ ಹಿಂದೆ ರನ್ಯಾ ಚಿನ್ನ ಕಳ್ಳಸಾಗಣೆಗೆ ಸರ್ಕಾರಿ ವಾಹನ ಬಳಸಿದ್ದಾರೆ ಎಂಬ ಶಂಕೆ ಡಿಆರ್‌ಐಗೆ ವ್ಯಕ್ತವಾಗಿದೆ. ಆ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ
ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲ ಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಸರ್ಕಾರ ಕಳುಹಿಸಿದೆ. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಕೆ.ವಿ.ಶರತ್ ಚಂದ್ರ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದೆ.
ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮೂಲಕ ತರುತ್ತಿದ್ದ ರನ್ಯಾ ಅವರು ಮಲತಂದೆ ರಾಮಚಂದ್ರ ರಾವ್ ಅವರ ಹೆಸರು ಬಳಸಿಕೊಂಡು ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು ಎಂಬ ಆರೋಪವಿದೆ.
ಚಿನ್ನದ ವ್ಯಾಪಾರಿಗಳ ವಿಚಾರಣೆಗೆ ಸಿದ್ಧತೆ
ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯ ವಿಧಾನದ ಪತ್ತೆಗೆ ಮುಂದಾಗಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಬೆಂಗಳೂರಿನ ಮೂವರು ಚಿನ್ನದ ವ್ಯಾಪಾರಿಗಳ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದೆ.
‘ಮುಂಬೈನಲ್ಲಿ ವಿಚಾರಣೆಗೆ ಒಳಪಡಿಸಿದ ಚಿನ್ನದ ವ್ಯಾಪಾರಿಗಳ ಜತೆಗೆಬೆಂಗಳೂರಿನ ವ್ಯಾಪಾರಿಗಳು ಹಣಕಾಸು ಮತ್ತು ಚಿನ್ನ ಸಾಗಣೆ ವ್ಯವಹಾರ ನಡೆಸಿರುವ ಮಾಹಿತಿ ದೊರೆತಿದೆ. ಆ ವಹಿವಾಟುಗಳು ಸಕ್ರಮವೇ ಅಥವಾ ಅಕ್ರಮವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.