ADVERTISEMENT

ಹಾವೇರಿ: ‘ಕನ್ನಡ ಪದವೀಧರರಿಗೆ ಶೇ 25ರಷ್ಟು ಉದ್ಯೋಗ ಮೀಸಲಿಡಲಿ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಜನವರಿ 2023, 14:29 IST
Last Updated 8 ಜನವರಿ 2023, 14:29 IST
ಹಾವೇರಿಯಲ್ಲಿ ಭಾನುವಾರ ನಡೆದ ‘ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಗೋಷ್ಠಿ–10ರಲ್ಲಿ ಹಿರಿಯ ಮಾಹಿತಿ ತಂತ್ರಜ್ಞಾನ ಸಲಹೆಗಾರ ಡಾ. ಉದಯಶಂಕರ ಪುರಾಣಿಕ ಮಾತನಾಡಿದರು
ಹಾವೇರಿಯಲ್ಲಿ ಭಾನುವಾರ ನಡೆದ ‘ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಗೋಷ್ಠಿ–10ರಲ್ಲಿ ಹಿರಿಯ ಮಾಹಿತಿ ತಂತ್ರಜ್ಞಾನ ಸಲಹೆಗಾರ ಡಾ. ಉದಯಶಂಕರ ಪುರಾಣಿಕ ಮಾತನಾಡಿದರು   

ಹಾವೇರಿ (ಪಾಪು–ಚಂಪಾ ವೇದಿಕೆ): ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕನ್ನಡದ ಕೆಲಸಕ್ಕೆ ಸರ್ಕಾರ ಪ್ರೋತ್ಸಾಹಿಸಬೇಕು. ಪ್ರತಿ ಹಂತದಲ್ಲಿಯೂ ಕನ್ನಡ ಬಳಸಿ ಬೆಳೆಸುವ ಸಂಕಲ್ಪ ಕನ್ನಡಿಗರು ಮಾಡಬೇಕು ಎಂಬ ಅಭಿಪ್ರಾಯ ಭಾನುವಾರ ಇಲ್ಲಿ ನಡೆದ ‘ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಗೋಷ್ಠಿ–10ರಲ್ಲಿ ವ್ಯಕ್ತವಾಯಿತು.

‘ಕನ್ನಡ ಭಾಷೆಯಲ್ಲಿಯೇ ಪದವಿ ಪೂರೈಸಿದವರಿಗೆ ಸರ್ಕಾರಿ ಹಾಗೂ ಹೊರಗುತ್ತಿಗೆ ಆಧಾರಿತ ನೌಕರಿಗಳಲ್ಲಿ ಶೇ 25ರಷ್ಟು ಉದ್ಯೋಗಗಳನ್ನು ಮೀಸಲಿಡಬೇಕು. ಈ ಬಗ್ಗೆ ಸರ್ಕಾರ ಆಶ್ವಾಸನೆ ಕೊಟ್ಟರೆ ಸಾಲದು. ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹಿರಿಯ ಮಾಹಿತಿ ತಂತ್ರಜ್ಞಾನ ಸಲಹೆಗಾರ ಡಾ. ಉದಯಶಂಕರ ಪುರಾಣಿಕ ಆಗ್ರಹಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಂಜಿನಿಯರಿಂಗ್‌, ಡಿಪ್ಲೊಮಾ ಶಿಕ್ಷಣ ಕೂಡ ಬರುವ ದಿನಗಳಲ್ಲಿ ಕನ್ನಡದಲ್ಲಿ ಆಗುತ್ತದೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಪುಸ್ತಕಗಳು ಕೂಡ ಸಿದ್ಧವಾಗಿವೆ. ಕನ್ನಡದಲ್ಲಿ ಎಂಜಿನಿಯರಿಂಗ್‌ ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಮಿಥ್ಯೆ ಹರಡಲಾಗುತ್ತಿದೆ. ಇಂಗ್ಲಿಷ್‌ನಲ್ಲಿ ಕಲಿತರೆ 25 ದೇಶಗಳಲ್ಲಿ ಕೆಲಸ ಗಿಟ್ಟಿಸಬಹುದು. ಆದರೆ, ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಕಲಿತವರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗುತ್ತಿದೆ ಎಂದರು.

ADVERTISEMENT

‘ಕನ್ನಡ ಸಾಹಿತ್ಯದಲ್ಲಿ ಮಾಹಿತಿ ತಂತ್ರಜ್ಞಾನ’ ಕುರಿತು ಮಾತನಾಡಿದ ಕ್ಷಮಾ ಭಾನುಪ್ರಕಾಶ್‌, ಇ–ಪುಸ್ತಕ, ಪಾಡ್‌ಕಾಸ್ಟ್‌ಗಳಿಂದ ಕನ್ನಡ ಸಾಹಿತ್ಯ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸಮೃದ್ಧವಾಗುತ್ತಿದೆ. ಅನೇಕ ಲೇಖಕರು ಸರಳ ಭಾಷೆಯಲ್ಲಿ ವಿಜ್ಞಾನದ ಅನೇಕ ಸಂಗತಿಗಳನ್ನು ಕನ್ನಡದಲ್ಲಿ ಲೇಖನಗಳನ್ನು ಬರೆದು ತಿಳಿಸುತ್ತಿದ್ದಾರೆ. ಕನ್ನಡದ ಹರವು ದಿನೇ ದಿನೇ ವಿಸ್ತಾರವಾಗುತ್ತಿದೆ ಎಂದು ಹೇಳಿದರು.

‘ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ’ದ ಬಗ್ಗೆ ಮಾತನಾಡಿದ ‘ಪ್ರಜಾವಾಣಿ’ ಆನ್‌ಲೈನ್‌ ವಿಭಾಗದ ಮುಖ್ಯಸ್ಥ ಅವಿನಾಶ್‌ ಬಿ., ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಾಕಷ್ಟು ಕೆಲಸವಾಗಿದೆ. ಇನ್ನೂ ಆಗುತ್ತಿದೆ. ಆದರೆ, ಆನ್‌ಲೈನ್‌ನಲ್ಲಿ ಕನ್ನಡಿಗರು ತಪ್ಪು ಕನ್ನಡ ಬಳಕೆಯಾಗದಂತೆ ಎಚ್ಚರ ವಹಿಸುವುದು ಬಹಳ ಅತ್ಯಗತ್ಯ. ಒಂದು ಸಲ ತಪ್ಪು ಕನ್ನಡ ಪದ ಪ್ರಯೋಗಿಸಿದರೆ ಗೂಗಲ್‌ನಲ್ಲಿ ಶಾಶ್ವತವಾಗಿ ಅದು ಉಳಿದುಬಿಡುತ್ತದೆ ಎಂದು ತಿಳಿಸಿದರು.

ಡಾ. ಮಧುಸೂದನ್‌ ಸಿರಗುಪ್ಪ ನಿರೂಪಿಸಿದರು. ಮಂಗಲಾ ಮೆಟಗುಡ್ಡ ಸ್ವಾಗತಿಸಿದರು. ಸಂತೋಷ್‌ ತಳಕೇರಿ ನಿರ್ವಹಿಸಿದರೆ, ವೀರೇಶ ಜಂಬಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.