ADVERTISEMENT

ಮೊದಲ ವರ್ಷದ ಸ್ಮರಣಾ ಕಾರ್ಯಕ್ರಮ: ಒಡನಾಡಿಗಳ ನೆನಪಿನಂಗಳದಲ್ಲಿ ಕವಿ ಸಿದ್ಧಲಿಂಗಯ್ಯ

ಬೆಂಗಳೂರಿನ ‘ಕಲಾಗ್ರಾಮ’ದಲ್ಲಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 19:31 IST
Last Updated 11 ಜೂನ್ 2022, 19:31 IST
ಕಾರ್ಯಕ್ರಮದಲ್ಲಿ (ಎಡದಿಂದ ಐದನೇಯವರು) ಚಿಂತಕ ಶೂದ್ರ ಶ್ರೀನಿವಾಸ್‌ ಅವರು ‘ಸಾವಿರಾರು ದನಿಗಳು’ ಹಾಗೂ ‘ಆಕಾಶದ ಅಗಲಕ್ಕೂ ನಿಂತ ಆಲವೇ’ ಕೃತಿಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಗಾಯಕ ಎಚ್. ಜನಾರ್ದನ್‌, ಪ್ರತಿಷ್ಠಾನದ ಅಧ್ಯಕ್ಷೆ ಡಾ.ಮಾನಸ ಸಿದ್ಧಲಿಂಗಯ್ಯ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ವಸತಿ ಸಚಿವ ವಿ.ಸೋಮಣ್ಣ, ಲೇಖಕ ಬೈರಮಂಗಲ ರಾಮೇಗೌಡ, ಲೇಖಕಿ ಎಂ.ಆರ್.ಕಮಲ ಮತ್ತು ಸಿ. ರಮಾಕುಮಾರಿ ಸಿದ್ಧಲಿಂಗಯ್ಯ ಇದ್ದರು       – ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ ಐದನೇಯವರು) ಚಿಂತಕ ಶೂದ್ರ ಶ್ರೀನಿವಾಸ್‌ ಅವರು ‘ಸಾವಿರಾರು ದನಿಗಳು’ ಹಾಗೂ ‘ಆಕಾಶದ ಅಗಲಕ್ಕೂ ನಿಂತ ಆಲವೇ’ ಕೃತಿಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಗಾಯಕ ಎಚ್. ಜನಾರ್ದನ್‌, ಪ್ರತಿಷ್ಠಾನದ ಅಧ್ಯಕ್ಷೆ ಡಾ.ಮಾನಸ ಸಿದ್ಧಲಿಂಗಯ್ಯ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ವಸತಿ ಸಚಿವ ವಿ.ಸೋಮಣ್ಣ, ಲೇಖಕ ಬೈರಮಂಗಲ ರಾಮೇಗೌಡ, ಲೇಖಕಿ ಎಂ.ಆರ್.ಕಮಲ ಮತ್ತು ಸಿ. ರಮಾಕುಮಾರಿ ಸಿದ್ಧಲಿಂಗಯ್ಯ ಇದ್ದರು       – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದನಿ ಇಲ್ಲದವರ ಧ್ವನಿ’ ಯಾಗಿದ್ದ ಕವಿ ಡಾ.ಸಿದ್ಧಲಿಂಗಯ್ಯರವರು ನಿಧನರಾಗಿ ವರ್ಷವಾಗಿದ್ದು, ಶನಿವಾರ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಸ್ಮರಣಾ ಕಾರ್ಯಕ್ರಮ ನಡೆಯಿತು.

ಇಡೀ ಕಲಾಗ್ರಾಮ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.ಅವರ ಒಡನಾಡಿಗಳು, ಅಭಿಮಾನಿಗಳು, ವಿದ್ಯಾರ್ಥಿಗಳು ಸ್ಮರಿಸಿದರು. ಕಾವ್ಯ ವಾಚನ, ಗಾಯನದ ಮೂಲಕ ಬಂಡಾಯ ಕವಿಯನ್ನೂ ನೆನಪಿಸಿದರು.

60 ಮಂದಿ ಬರಹಗಾರರ ‘ಸಾವಿರಾರು ದನಿಗಳು’ (ಸಂಪಾದಕ –ಡಾ.ಶಿವರಾಜ್‌ ಬ್ಯಾಡರಹಳ್ಳಿ, ಮುದಲ್‌ ವಿಜಯ್‌) ಹಾಗೂ ಸಿದ್ಧಲಿಂಗಯ್ಯ ಅವರ ಭಾಷಣದ ‘ಆಕಾಶದ ಅಗಲಕ್ಕೂ ನಿಂತ ಆಲವೇ’ (ಸಂಪಾದಕಿ – ಡಾ.ಸಿ.ಶೋಭಾ) ಕೃತಿಗಳ ಲೋಕಾರ್ಪಣೆಯ ಮೂಲಕ ಗೌರವ ಸಲ್ಲಿಸಲಾಯಿತು.

ADVERTISEMENT

ಸಚಿವರಾದ ವಿ.ಸೋಮಣ್ಣ, ಮುನಿರತ್ನ, ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕೊಂಡಜ್ಜಿ, ಚಿಂತಕ ಶೂದ್ರ ಶ್ರೀನಿವಾಸ‌, ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಅವರು ಸಿದ್ಧಲಿಂಗಯ್ಯ ಅವರೊಂದಿನ ಒಡನಾಟವನ್ನು ಸ್ಮರಿಸಿದರು. ಸಮಾಧಿ ಸ್ಥಳದಲ್ಲಿ ಬುದ್ಧ ವಂದನೆ ನಡೆಯಿತು.

ಸಚಿವ ವಿ.ಸೋಮಣ್ಣ ಮಾತನಾಡಿ, ‘ನೋವಿನಿಂದಲೇ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದಿಂದ ಸಮಾಜದ ಓರೆ–ಕೋರೆ ತಿದ್ದಲು ಪ್ರಯತ್ನಿಸಿದವರು. ಅವರ ಕವಿತೆಗಳನ್ನು ಡಿಜಿಟಲ್‌ ರೂಪದಲ್ಲಿ ಹೊರತಂದರೆ ಆರ್ಥಿಕ ನೆರವು ಒದಗಿಸಲಾಗುವುದು’ ಎಂದರು.

ಚಿಂತಕ ಶೂದ್ರ ಶ್ರೀನಿವಾಸ ಮಾತನಾಡಿದರು. ಲೇಖಕಿ ಡಾ.ಎಂ.ಆರ್.ಕಮಲ, ಗಾಯಕ ಎಚ್‌.ಜನಾರ್ದನ್‌,ಡಾ.ಸಿದ್ಧಲಿಂಗಯ್ಯ ಸ್ಮಾರಕದ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಮಾನಸ ಸಿದ್ಧಲಿಂಗಯ್ಯ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ನ ಬಿ.ಕೆ.ಸುರೇಶ್‌, ಕಿರಂ ಪ್ರಕಾಶನದ ಜಿ.ವಿ.ಧನಂಜಯ್‌, ಆರ್‌.ಮೋಹನ್‌ಕುಮಾರ್‌ ಹಾಜರಿದ್ದರು.

‘₹ 1 ಕೋಟಿ ಅನುದಾನ, ಭೂಮಿ ಮಂಜೂರು’
‘ಕವಿ ಸಿದ್ಧಲಿಂಗಯ್ಯ ನೆನಪಿನಲ್ಲಿ ಸ್ಥಾಪಿಸಲಿರುವ ಗ್ರಂಥಾಲಯಕ್ಕೆ ₹ 1 ಕೋಟಿ ಅನುದಾನ, ಭೂಮಿ ಮಂಜೂರಾತಿ ಹಾಗೂ ವೈಯಕ್ತಿಕವಾಗಿ ಆರ್ಥಿಕ ನೆರವು ಒದಗಿಸಲಾಗುವುದು’ ಎಂದು ಸಚಿವರಾದ ವಿ. ಸೋಮಣ್ಣ ಮತ್ತು ಮುನಿರತ್ನ ಭರವಸೆ ನೀಡಿದರು.

‘ಕಲಾಗ್ರಾಮದಲ್ಲಿ ಸಮಾಧಿ ಸ್ಥಳದಲ್ಲಿ ನೆನಪಿನಲ್ಲಿ ಉಳಿಯುವಂತಹ ಯೋಜನೆ ರೂಪಿಸಲಾಗುವುದು’ ಎಂದು ಸೋಮಣ್ಣ ಹೇಳಿದರು. ‘ಸಿದ್ಧಲಿಂಗಯ್ಯ ಹೆಸರಿನ ಟ್ರಸ್ಟ್‌ಗೆ ಜಮೀನು ನೀಡಿದರೆ ಗ್ರಂಥಾಲಯ ನಿರ್ಮಿಸಲಾಗುವುದು’ ಎಂದು ಮೇಲ್ಮನೆ ಸದಸ್ಯ ಮೋಹನ್‌ ಕೊಂಡಜ್ಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.