ADVERTISEMENT

ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಕನ್ನಡ ಮಾಯ: ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 9:14 IST
Last Updated 31 ಜನವರಿ 2023, 9:14 IST
   

ಬೆಳಗಾವಿ: ನಗರದಲ್ಲಿ ಬಿಜೆಪಿ ರೈತ ಮೋರ್ಚಾ ಜ.29, 30ರಂದು ಸಂಘಟಿಸಿದ್ದ ರಾಷ್ಟ್ರೀಯ ಕಾರ್ಯಕಾರಣಿಯ ವೇದಿಕೆಯಲ್ಲಿ ಕನ್ನಡ ಬಳಸದಿರುವುದಕ್ಕೆ ಜೆಡಿಎಸ್‌ ಆಕ್ಷೇಪ ವ್ಯಕ್ತಪಡಿಸಿದೆ.

‘ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿಯ ವೇದಿಕೆಯಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕನ್ನಡ ಸಿಗದಿರುವುದು ನಾಚಿಕೆಗೇಡಿನ‌ ಸಂಗತಿ. ನಮ್ಮ ರಾಜ್ಯದಲ್ಲಿ ನಡೆಯುವ ಸಭೆಯಲ್ಲಿ ಒಂದು ಸಾಲು ಕನ್ನಡ ಬಳಸದೆ, ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿರುವುದು ಖಂಡನಾರ್ಹ’ ಎಂದು ಜೆಡಿಎಸ್‌ ಪಕ್ಷದ ಟ್ವಿಟರ್‌ನಲ್ಲಿ ಮಂಗಳವಾರ ಟ್ವೀಟ್‌ ಮಾಡಲಾಗಿದೆ.

‘ದೆಹಲಿಯ ಹೈಕಮಾಂಡ್ ಓಲೈಸಲು ಇಂತಹ ಆತ್ಮಗೌರವವಿಲ್ಲದ ನಡೆಯನ್ನು ಇನ್ನೂ ಎಷ್ಟು ದಿನ ಮುಂದುವರಿಸುತ್ತೀರಿ ಸಿ.ಟಿ.ರವಿ ಅವರೇ? ಕನ್ನಡ ಭಾಷೆ, ಜಲ, ಕನ್ನಡಿಗರ ಬದುಕು, ಕರುನಾಡ ಏಳ್ಗೆ ಎಲ್ಲದರ ಬಗ್ಗೆಯೂ ಇಷ್ಟು ತಾತ್ಸಾರದ ನಡೆ ದುರಭಿಮಾನದಿಂದ ಕೂಡಿದೆ. ಹೈಕಮಾಂಡ್ ಗುಲಾಮಿ ಪಕ್ಷ ಎನ್ನಲು‌ ಇದಕ್ಕಿಂತ ಹೆಚ್ಚೇನು ಬೇಕು?’ ಎಂದು ಪ್ರಶ್ನಿಸಿದೆ.

ADVERTISEMENT

‘ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂದ ಕುವೆಂಪು ಅವರ ನಾಡಿನ ನಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇರಬೇಕು. ನಿಮ್ಮ ಕನ್ನಡ ವಿರೋಧಿ ನಡೆಗೆ ಜನತೆ ಸೂಕ್ತ ಉತ್ತರ ನೀಡುತ್ತಾರೆ. ರಾಜಕೀಯ ಲಾಭ-ನಷ್ಟದ ಕಾರಣಕ್ಕೆ ನಮ್ಮ ಸ್ವಾಭಿಮಾನವನ್ನು ಅಡ ಇಡುವ ಕೆಲಸ ಘನತೆ ತರುವಂತದಲ್ಲ’ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.