ADVERTISEMENT

ಬೆಳಗಾವಿ ಪಾಲಿಕೆಯಲ್ಲಿ ಮೊದಲ ರಾಜ್ಯೋತ್ಸವ

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹೋಳಿಗೆ ಊಟ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 20:15 IST
Last Updated 1 ನವೆಂಬರ್ 2018, 20:15 IST
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಎಂಇಎಸ್‌ ಬೆಂಬಲಿತ ಉಪ ಮೇಯರ್‌ ಮಧುಶ್ರೀ ಪೂಜಾರಿ ಇದ್ದಾರೆ
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಎಂಇಎಸ್‌ ಬೆಂಬಲಿತ ಉಪ ಮೇಯರ್‌ ಮಧುಶ್ರೀ ಪೂಜಾರಿ ಇದ್ದಾರೆ   

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕನ್ನಡ ಭಾಷಿಕರಾದ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಹಾಗೂ ಎಂಇಎಸ್‌ ಬೆಂಬಲಿತ ಉಪ ಮೇಯರ್‌ ಮಧುಶ್ರೀ ಪೂಜಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು. ಪಾಲಿಕೆ ಸದಸ್ಯರಾದ ಜಯಶ್ರೀ ಮಾಳಗಿ, ಪುಷ್ಪಾ ಪರ್ವತರಾವ್‌, ದೀಪಕ ಜಮಖಂಡಿ, ಪಾಲಿಕೆ ಆಯುಕ್ತ ಶಶಿಧರ ಕುರೇರ ಈ ಕ್ಷಣಕ್ಕೆ ಸಾಕ್ಷಿಯಾದರು.

ADVERTISEMENT

ಕಾರ್ಯಕ್ರಮದ ಬಳಿಕ ಉಪ ಮೇಯರ್‌, ಎಂಇಎಸ್‌ ಆಯೋಜಿಸಿದ್ದ ಕರಾಳ ದಿನಾಚರಣೆಯ ಮೆರವಣಿಗೆಯಲ್ಲಿ ಪಾಲ್ಗೊಂಡರು.

‘ಪ್ರತಿವರ್ಷ ಜಿಲ್ಲಾಡಳಿತ ಆಯೋಜಿಸುತ್ತಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲಿಕೆ ಸಿಬ್ಬಂದಿ ಭಾಗವಹಿಸುತ್ತಿದ್ದರು. ಹೀಗಾಗಿ ಇಷ್ಟು ವರ್ಷ ಪಾಲಿಕೆ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೆ, ಈ ಬಾರಿ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಅವರ ನಿರ್ದೇಶನದ ಮೇರೆಗೆ ಮೊದಲ ರಾಜ್ಯೋತ್ಸವ ಆಚರಿಸಿದ್ದೇವೆ’ ಎಂದು ಶಶಿಧರ ಅವರು ತಿಳಿಸಿದರು.

ಹೋಳಿಗೆ ಊಟ: ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಡಿದ್ದರು. ಹೋಟೆಲ್‌ ಮಾಲೀಕರ ಸಂಘವು 10,000 ಲಡ್ಡು ವಿತರಿಸಿತು.

ಕಲ್ಲು ತೂರಾಟ

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌), ಕನ್ನಡ ರಾಜ್ಯೋತ್ಸವ ವಿರೋಧಿಸಿ ಗುರುವಾರ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯ ಮೆರವಣಿಗೆ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ‍ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಬಸವೇಶ್ವರ ವೃತ್ತದ ಬಳಿ ಮೆರವಣಿಗೆ ಬಂದಾಗ ಈ ಘಟನೆ ನಡೆದಿದ್ದು, ಪೊಲೀಸರ ಎರಡು ಜೀಪ್‌ಗಳಿಗೆ ಕಲ್ಲು ಬಿದ್ದಿದೆ. ಮೆರವಣಿಗೆಯಲ್ಲಿದ್ದ ಎಂಇಎಸ್‌ನವರೇ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ,ಕಲ್ಲು ತೂರಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.