
ಬೆಂಗಳೂರು: ಸಂಚಿತ ವೇತನದ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯನ್ನೇ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅವಲಂಬಿಸಿದೆ. ಸಿಬ್ಬಂದಿ ನೇಮಕಾತಿ ಹಾಗೂ ವೇತನಕ್ಕೆ ಸಂಬಂಧಿಸಿದ ಗೊಂದಲವು ಪರಿಷತ್ತಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.
ಪರಿಷತ್ತಿನಲ್ಲಿ ಒಟ್ಟು 46 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಇಬ್ಬರು ಮಾತ್ರ ಕಾಯಂ ನೌಕರರಾಗಿದ್ದು, ಉಳಿದವರನ್ನು ಕಾಲಕಾಲಕ್ಕೆ ಸಂಚಿತ ವೇತನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಸದ್ಯ ವಿವಿಧ ಹುದ್ದೆ ನಿಭಾಯಿಸುತ್ತಿರುವವರಲ್ಲಿಬಹುತೇಕರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೌಕರರಾಗಿದ್ದಾರೆ.
ದತ್ತಿ ವಿಭಾಗ, ಜಿಲ್ಲಾ ಘಟಕ ಮತ್ತು ಕಾರ್ಯಕ್ರಮ ವಿಭಾಗ, ಸದಸ್ಯತ್ವ ವಿಭಾಗ, ಲೆಕ್ಕಪತ್ರ ವಿಭಾಗ, ಪುಸ್ತಕ ಮಾರಾಟ ವಿಭಾಗ ಸೇರಿ ಬಹುತೇಕ ಎಲ್ಲ ವಿಭಾಗವನ್ನು ಸಂಚಿತ ವೇತನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೇ ನಿಭಾಯಿಸುತ್ತಿದ್ದಾರೆ. ಈಗ ಅವರ ನೇಮಕಾತಿ ಪ್ರಕ್ರಿಯೆ ಬಗೆಗೆ ಗೊಂದಲ ಉಂಟಾದ ಪರಿಣಾಮ, ವೇತನವಿಲ್ಲದೆ ಸಿಬ್ಬಂದಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಕಸಾಪ ಅಧ್ಯಕ್ಷರಾಗಿದ್ದ ಮಹೇಶ ಜೋಶಿ ಅವರ ಕಾರ್ಯವಿಧಾನದ ಬಗ್ಗೆ ಆರೋಪಗಳು ಎದುರಾಗಿದ್ದರಿಂದಾಗಿ ಸಹಕಾರ ಇಲಾಖೆಯು ವಿಚಾರಣಾಧಿಕಾರಿಯನ್ನೂ ನೇಮಕ ಮಾಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರು 2025ರ ಅಕ್ಟೋಬರ್‌ನಲ್ಲಿ ಕಸಾಪ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಂಚಿತ ವೇತನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ನೇಮಕಾತಿಗೆ ಸರ್ಕಾರದ ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣ ನೀಡಿದ ಅವರು, ವೇತನ ತಡೆ ಹಿಡಿದಿದ್ದಾರೆ. ಇದರಿಂದಾಗಿ ಅಕ್ಟೋಬರ್‌ನಿಂದ ವೇತನ ಸಿಗದೆ ಸಿಬ್ಬಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಅನುದಾನವಿದ್ದರೂ ವೇತನವಿಲ್ಲ: ಕಸಾಪ ಸಿಬ್ಬಂದಿಯ ವೇತನಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಳೆದ ಅಕ್ಟೋಬರ್ ತಿಂಗಳಲ್ಲಿ ಪರಿಷತ್ತಿಗೆ ₹1.01 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆರು ತಿಂಗಳ ವೇತನ ಪಾವತಿಗೆ ಈಅನುದಾನ ಬಳಕೆ ಮಾಡಿಕೊಳ್ಳಲು ಸೂಚಿಸಿದೆ. ಇಬ್ಬರು ಕಾಯಂನೌಕರರಿಗೆ ಮಾತ್ರ ಬಿಡುಗಡೆಯಾದ ಅನುದಾನದಲ್ಲಿ ವೇತನ ಪಾವತಿಸಿದ್ದು, ಉಳಿದ ಸಿಬ್ಬಂದಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.
ವೇತನ ಪಾವತಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಿಂದ ಮಾರ್ಗದರ್ಶನ ಕೋರಿರುವ ಆಡಳಿತಾಧಿಕಾರಿ, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಿವರ ಸಹಿತ ವರದಿಯನ್ನು ಜನವರಿ 2ರಂದು ಒದಗಿಸಿದ್ದಾರೆ. ಕೆಲ ಸಿಬ್ಬಂದಿಯನ್ನು ಬೈ–ಲಾ ಅನುಸಾರ ನೇಮಕ ಮಾಡಿಕೊಂಡರೂ, ಕಾರ್ಯಕಾರಿ ಹಾಗೂ ಹಣಕಾಸು ಸಮಿತಿಯಲ್ಲಿ ಅನುಮೋದನೆ ಪಡೆದಿಲ್ಲ ಎಂದು ಉಲ್ಲೇಖಿಸಿದ್ದಾರೆ.
‘ಕಾಯಂ ನೌಕರರಿಗೆ ವೇತನ ಪಾವತಿ ಮಾಡಲಾಗಿದೆ. ಸಂಚಿತ ವೇತನದ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯಲ್ಲಿ ಕೆಲವರ ನೇಮಕಾತಿಗೆ ಹಣಕಾಸು ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿಲ್ಲ. ವಯೋನಿವೃತ್ತಿ ಹೊಂದಿದ ಕೆಲವರನ್ನು ಅಧ್ಯಕ್ಷರ ಅನುಮೋದನೆ ಅನ್ವಯ ಮುಂದುವರಿಸಲಾಗಿದೆ. ಸರ್ಕಾರಿ ಆದೇಶದಲ್ಲಿ
‘ಚಾಲ್ತಿಯಲ್ಲಿರುವ ಹಾಗೂ ಮುಂದೆ ಉದ್ಭವಿಸುವ ಖಾಲಿ ಹುದ್ದೆಗಳನ್ನು ಸರ್ಕಾರದ ಅನುಮತಿ ಇಲ್ಲದೆ ಭರ್ತಿ ಮಾಡಕೂಡದು’ ಎಂದು ಉಲ್ಲೇಖಿಸಲಾಗಿದೆ ಎಂದು ಕಸಾಪ ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ವರದಿಯಲ್ಲಿ ತಿಳಿಸಿದ್ದಾರೆ.
ಸಂಚಿತ ವೇತನದ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯಲ್ಲಿ ಒಂಬತ್ತು ಸಿಬ್ಬಂದಿ 20 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯಿಂದಪರಿಷತ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಟು ಮಂದಿ 10 ವರ್ಷ-ಅದಕ್ಕಿಂತ ಹೆಚ್ಚಿನ ಅವಧಿಯಿಂದ ಸಂಚಿತ ವೇತನದಡಿ ವಿವಿಧ ಹುದ್ದೆಯಲ್ಲಿದ್ದಾರೆ.
‘ಪರಿಷತ್ತಿನ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಹಾಗೂನಿಯಮ–ನಿಬಂಧನೆಗಳ ಪಾಲನೆಗೆ, ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅವಶ್ಯವಿರುವ ಸಿಬ್ಬಂದಿಯನ್ನು ಕೇಂದ್ರ ಪರಿಷತ್ತಿಗೆ ನೇಮಕ ಮಾಡಿಕೊಳ್ಳುವ ಅಧಿಕಾರ ಅಧ್ಯಕ್ಷರಿಗೆ ಇರುತ್ತದೆ’ ಎಂದು ಕಸಾಪಬೈ–ಲಾದಲ್ಲಿ ತಿಳಿಸಲಾಗಿದೆ.
‘ಕಾಲಕಾಲಕ್ಕೆ ಸಿಬ್ಬಂದಿ ವೇತನ ಹೆಚ್ಚಿಸುವ, ಬಡ್ತಿ ನೀಡುವ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವ, ದಂಡಿಸುವ ಹಾಗೂ ಕೆಲಸದಿಂದ ವಜಾಗೊಳಿಸುವ ಅಧಿಕಾರವನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರು ಹೊಂದಿರುತ್ತಾರೆ. ಈ ಸಂಬಂಧ ತಮ್ಮ ಆದೇಶವನ್ನು ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಾಖಲಿಸತಕ್ಕದ್ದು’ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.