ADVERTISEMENT

ಕನ್ನಡ ಮಸೂದೆ: ಕಸಾಪ ಶಿಫಾರಸು

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಪರಿಷ್ಕರಿಸಲು ಸರ್ಕಾರಕ್ಕೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:31 IST
Last Updated 27 ಅಕ್ಟೋಬರ್ 2022, 21:31 IST
   

ಬೆಂಗಳೂರು: ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022’ರ ತಿದ್ದುಪಡಿಗೆ ಸಂಬಂಧಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಶಿಫಾರಸುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಮಸೂದೆಜಾರಿ ಸಮಿತಿಯಲ್ಲಿ ಕಸಾಪ ಅಧ್ಯಕ್ಷರಿಗೆ ಸ್ಥಾನ, ವಿವಿಧ ಸಂಸ್ಥೆಗಳು ಹಾಗೂ ಕೇಂದ್ರಗಳ ಮೇಲಿನ ಫಲಕಗಳಲ್ಲಿ ಶೇ60ರಷ್ಟು ಕನ್ನಡ ಬಳಕೆ ಸೇರಿವಿವಿಧ ಶಿಫಾರಸುಗಳನ್ನು ಮಾಡಲಾಗಿದೆ.

ಮಸೂದೆ ಬಗ್ಗೆ ಇತ್ತೀಚೆಗೆ ಪರಿಷತ್ತು ಆಯೋಜಿಸಿದ ಚಿಂತನಾ ಗೋಷ್ಠಿಯಲ್ಲಿ ಸ್ವಾಮೀಜಿಗಳು, ಕಾನೂನು ತಜ್ಞರು, ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಪರ ಸಂಘ–ಸಂಸ್ಥೆಗಳ ಮುಖ್ಯಸ್ಥರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಕೆಲ ಅಂಶಗಳ ಬಗ್ಗೆ ಹಲವರು ಆಕ್ಷೇಪಿಸಿದ್ದರು. ಈ ಅಭಿಪ್ರಾಯಗಳ ಅನುಸಾರ ಶಿಫಾರಸನ್ನು ಕಸಾಪ ಮಾಡಿದೆ.

ಪ್ರಮುಖ ಶಿಫಾರಸುಗಳು:

*ಕನ್ನಡಿಗ ಎಂದರೆ: ಕರ್ನಾಟಕ ರಾಜ್ಯದಲ್ಲಿ 15 ವರ್ಷಗಳಿಗಿಂತ ಕಡಿಮೆ ಇಲ್ಲದ ಅವಧಿವರೆಗೆ ವಾಸವಾದ ವ್ಯಕ್ತಿ ಅಥವಾ ಆತನ ಸಂತಾನ ಅಥವಾ ಅಂಥ ವ್ಯಕ್ತಿಯ ಕಾನೂನು ಸಮ್ಮತ ಪಾಲನೆ ಪೋಷಣೆಯಲ್ಲಿರುವ ವ್ಯಕ್ತಿ. ಕರ್ನಾಟಕದಲ್ಲಿ ವಾಸವಾಗಿರದೇ ಗಡಿರಾಜ್ಯ, ಹೊರರಾಜ್ಯ ಮತ್ತು ಹೊರದೇಶಗಳನ್ನು ಒಳಗೊಂಡಂತೆ ಎಲ್ಲಿಯೇ ವಾಸವಾಗಿದ್ದರೂ ಕನ್ನಡದಲ್ಲಿ ಓದಬಲ್ಲ ಮತ್ತು ಮಾತನಾಡಬಲ್ಲ ವ್ಯಕ್ತಿ.

ADVERTISEMENT

*ಭಾಷಾ ಅಲ್ಪಸಂಖ್ಯಾತರು: ಸರ್ಕಾರ ಮತ್ತು ಇಲಾಖೆಯ ಮುಖ್ಯಸ್ಥರೊಂದಿಗೆ ಮತ್ತು ಇತರೆ ಸರ್ಕಾರಿ ಕಚೇರಿಗಳೊಂದಿಗೆ ಪತ್ರ ವ್ಯವಹಾರಕ್ಕಾಗಿ ಕನ್ನಡ ಭಾಷೆಯನ್ನು ಬಳಸಬೇಕು.

*ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವಾಗ ಕನ್ನಡ ಭಾಷಾ ಬಳಕೆಯನ್ನು ಉತ್ತೇಜಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಆಂಗ್ಲ ಭಾಷೆ ಬಳಸಬಹುದು.

*ರಾಜಭಾಷಾ ಆಯೋಗವು ಅಧಿನಿಯಮಗಳನ್ನು ಕನ್ನಡಕ್ಕೆ ಭಾಷಾಂತರಿಸುವುದಕ್ಕೆ ಜವಾಬ್ದಾರವಾಗಿರಬೇಕು.

*ಮಸೂದೆಯ ಜಾರಿ ಪ್ರಾಧಿಕಾರ‌ಗಳಾಗಿ ರಚಿಸಲಾದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಉಪಾಧ್ಯಕ್ಷರಾಗಿ ಇರಬೇಕು.

*ಕರ್ನಾಟಕ ವಕೀಲರ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಕನ್ನಡ ದಿನಪತ್ರಿಕೆಯ ಸಂಪಾದಕರೊಬ್ಬರು ಮಸೂದೆಯ ಜಾರಿ ಪ್ರಾಧಿಕಾರ‌ಗಳಾಗಿ ರಚಿಸಲಾದ ಸಮಿತಿಯಲ್ಲಿ ಸದಸ್ಯರಾಗಿರಬೇಕು.

*ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಕ್ರಮ ವಹಿಸಬೇಕು. ಕನ್ನಡ ಮಾಧ್ಯಮದಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಶೇಕಡಾವಾರು ಮೀಸಲಾತಿ ಕಲ್ಪಿಸಬೇಕು.

*ಜಿಲ್ಲಾ ನ್ಯಾಯಾಲಯಗಳು ತಮ್ಮ ಕಲಾಪಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸಬೇಕು.

*ಹೈಕೋರ್ಟ್‌ನಲ್ಲಿ ತೀರ್ಪು ಹಾಗೂ ಆದೇಶಗಳನ್ನು ರಾಜ್ಯದ ಅಧಿಕೃತ ಭಾಷೆ ಕನ್ನಡದಲ್ಲಿ ನೀಡಲು ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರ ಕ್ರಮಕೈಗೊಳ್ಳಬೇಕು.

*ಬ್ಯಾಂಕುಗಳು, ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.