ADVERTISEMENT

ಸಾಹಿತ್ಯಾಸಕ್ತರ ರಸಭಂಗ ಮಾಡಿದ ದೂಳು

ಮುಖ್ಯ ವೇದಿಕೆ ಇರುವ ಶಾಮಿಯಾನದ ಎದುರು ಕುಳಿತುಕೊಳ್ಳಲೂ ಆಗದಷ್ಟು ಸಮಸ್ಯೆ

ಮನೋಜ ಕುಮಾರ್ ಗುದ್ದಿ
Published 5 ಜನವರಿ 2019, 7:22 IST
Last Updated 5 ಜನವರಿ 2019, 7:22 IST
84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಭರದಿಂದ ಸಿದ್ಧತೆ ನಡೆದಿದ್ದು, ನೆಲಕ್ಕೆ ದೂಳು ಹಾರದಂತೆ ಶುಕ್ರವಾರ ನೀರು ಸಿಂಪಡಿಸಲಾಯಿತು
84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಭರದಿಂದ ಸಿದ್ಧತೆ ನಡೆದಿದ್ದು, ನೆಲಕ್ಕೆ ದೂಳು ಹಾರದಂತೆ ಶುಕ್ರವಾರ ನೀರು ಸಿಂಪಡಿಸಲಾಯಿತು   

ಧಾರವಾಡ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾಡಳಿತವು ಮುಖ್ಯ ವೇದಿಕೆ ಎದುರಿನ ಶಾಮಿಯಾನದ ಬಳಿ ಉಂಟಾದ ದೂಳನ್ನು ನಿಯಂತ್ರಿಸಲು ವಿಫಲವಾಯಿತು.

ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯು ವೇದಿಕೆ ಬಳಿ ಬರುತ್ತಿದ್ದಂತೆಯೇ ಜನಜಂಗುಳಿ ಜಾಸ್ತಿಯಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನೂ ಸಿಂಪಡಿಸಿರಲಿಲ್ಲ. ಹೀಗಾಗಿ ದೂಳು ಏಳುತ್ತಿತ್ತು. ವಿಪರೀತ ದೂಳು ಆಗುತ್ತಿದ್ದಂತೆ ಶಾಮಿಯಾನದಲ್ಲಿದ್ದ ಆರಾಮಾಗಿ ಕುಳಿತಿದ್ದ ಜನರೂ ಹೊರ ನಡೆದರು.

ಅಲ್ಲಿಯೇ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಇಡಲಾಗಿತ್ತು. ನೀರು ಕುಡಿಯಲು ಬಂದಾಗಲೂ ದೂಳು ಎದ್ದಿದ್ದರಿಂದ ಸುಸ್ತಾದ ಜನರು ವೇದಿಕೆಯ ಮುಂಭಾಗದತ್ತ ತೆರಳಿದರು. ಅಲ್ಲಿ ಪೊಲೀಸರು ಪಾಸ್‌ಗಳನ್ನು ಪರಿಶೀಲಿಸಿ ಒಳಗೆ ಬಿಡಲು ಬ್ಯಾರಿಕೇಡ್ ಅಳವಡಿಸಿದ್ದರಿಂದ ಅಲ್ಲಿಯೂ ಹೋಗಲಾಗಲಿಲ್ಲ. ವೇದಿಕೆ ಕಾರ್ಯಕ್ರಮದ ಗೊಡವೆಯೇ ಬೇಡವೆಂದು ಹಲವು ಸಾಹಿತ್ಯಾಸಕ್ತರು ಪುಸ್ತಕ ಮಳಿಗೆಗಳತ್ತ ತೆರಳಿದರು.

ADVERTISEMENT

ಇದು ಮುಖ್ಯ ವೇದಿಕೆಯ ಎದುರಿನ ಸಮಸ್ಯೆಯಷ್ಟೇ ಆಗಿರಲಿಲ್ಲ. ಅಲ್ಲಿಂದ ಊಟಕ್ಕೆ ತೆರಳೋಣವೆಂದು ಹೋದರೂ ರಸ್ತೆಯಲ್ಲಿ ವಿಪರೀತ ದೂಳು ಎದ್ದಿತ್ತು. ಅಲ್ಲಿಯೂ ಸಾಲುಗಟ್ಟಿ ನಿಲ್ಲಬೇಕೆಂದರೆ ಊಟ ಸಿಗುವ ಭರವಸೆ ಇರಲಿಲ್ಲ. ಹೀಗಾಗಿ ವಾಪಸ್‌ ಬಂದರು. ಸಂಜೆಯ ವೇಳೆಗೆ ಇನ್ನೂ ಸಾಕಷ್ಟು ದೂಳಿನ ಕಣಗಳು ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಿಗೆ ತಾಕುತ್ತಲೇ ಇತ್ತು. ‘₹ 12 ಕೋಟಿ ಖರ್ಚು ಮಾಡಿ ಸಮ್ಮೇಳನ ಮಾಡುತ್ತಿದ್ದಾರೆ. ದೂಳನ್ನು ನಿಯಂತ್ರಿಸಲೂ ಇವರಿಂದ ಆಗುವುದಿಲ್ಲ ಎಂದರೆ ಹೇಗೆ? ಇಲ್ಲಿನ ವ್ಯವಸ್ಥೆ ನೋಡಿ ನಮಗೆ ನಿರಾಸೆಯಾಗಿದೆ’ ಎಂದು ಬೆಂಗಳೂರಿನ ಮರಳುಕುಂಟೆಯಿಂದ ಬಂದಿದ್ದ ಶಿವಪ್ರಕಾಶ್‌ ಬೇಸರ ವ್ಯಕ್ತಪಡಿಸಿದರು.

‘ನಗರದಿಂದ ದೂರದಲ್ಲಿ ಸಮ್ಮೇಳನ ವ್ಯವಸ್ಥೆ ಮಾಡಿದ್ದು ಸ್ವಾಗತಾರ್ಹವೇ ಆದರೂ ಲಕ್ಷಾಂತರ ಜನ ಸೇರುವುದರಿಂದ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ಆಸ್ತಮಾದಿಂದ ಬಳಲುತ್ತಿರುವವರಿಗೆ ದೂಳು ಸಾಕಷ್ಟು ಕೆಟ್ಟ ಪರಿಣಾಮ ಬೀರಲಿದೆ. ಸಾಹಿತ್ಯ ಹಬ್ಬಕ್ಕೆ ಬಂದವರು ಇಲ್ಲಿಂದ ರೋಗವನ್ನು ಕೊಂಡೊಯ್ಯಬೇಕೇ’ ಎಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಬಂದಿದ್ದ ಮಧುಲತಾ ಪ್ರಶ್ನಿಸಿದರು.

ಪುಸ್ತಕ ಮಳಿಗೆ ಅವ್ಯವಸ್ಥೆ

ಮುಖ್ಯ ದ್ವಾರದ ಎದುರಿನ ರಸ್ತೆಯಲ್ಲಿ ನೂರಾರು ಪುಸ್ತಕ ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಒಂದು ಕಡೆ ಪುಸ್ತಕ ವೀಕ್ಷಿಸಲು ಹೋದವರು ಅದರ ಹಿಂದಿನ ಮಳಿಗೆಗೆ ಭೇಟಿ ನೀಡಲು ಕಿಲೋಮೀಟರ್‌ಗಟ್ಟಲೇ ಸುತ್ತಬೇಕಿತ್ತು. ಅದರ ಬದಲು ಎದುರು ಬದುರಾಗಿ ಮಳಿಗೆಗಳನ್ನು ಹಾಕಿದ್ದರೆ ಸಾಹಿತ್ಯ ಪ್ರೇಮಿಗಳು ಎರಡೂ ಕಡೆ ನೋಡಿಕೊಂಡು ಹೋಗಬಹುದಿತ್ತು. ವ್ಯರ್ಥ ಅಲೆದಾಟ ತಪ್ಪುತ್ತಿತ್ತು ಎಂದು ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ಕವಯತ್ರಿ ಭುವನಾ ಹಿರೇಮಠ, ಲೇಖಕ ಕಳಕೇಶ ಗೊರವರ ಅಭಿಪ್ರಾಯಪಟ್ಟರು.

ಟೇಬಲ್‌ ಮಾಯ: ಲೇಖಕಿ, ಹೋರಾಟಗಾರ್ತಿ ಶಾರದಾ ಗೋಪಾಲ ಅವರು ಮಳಿಗೆಯಲ್ಲಿ ಜೋಡಿಸಲು ಪುಸ್ತಕ ತರುವಾಗಲೇ ಅವರಿಗೆ ಸಂಘಟಕರು ನೀಡಿದ್ದ ಟೇಬಲ್‌ ಅನ್ನು ಯಾರೋ ಹೊತ್ತೊಯ್ದಿದ್ದರು! ಈ ಬಗ್ಗೆ ಸಂಘಟಕರನ್ನು ವಿಚಾರಿಸಿದರೆ ಯಾವುದೇ ಸ್ಪಂದನೆ ತೋರಿಸಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.