ADVERTISEMENT

ತಾಯ್ನಾಡಿಗೆ ಬಂದಿಳಿದ 326 ಕನ್ನಡಿಗರು: ಹೋಟೆಲ್–ರೆಸಾರ್ಟ್‌ಗಳಲ್ಲಿ ಕ್ವಾರಂಟೈನ್‌

ಯಾರಲ್ಲೂ ಕೊರೊನಾ ಸೋಂಕು ಲಕ್ಷಣ ಇಲ್ಲ |

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:45 IST
Last Updated 11 ಮೇ 2020, 19:45 IST
   

ಬೆಂಗಳೂರು: ಲಂಡನ್‌ನಿಂದ 326 ಕನ್ನಡಿಗರನ್ನು ಹೊತ್ತು ತಂದ ಏರ್‌ಇಂಡಿಯಾ ವಿಮಾನ ಸೋಮವಾರ ಬೆಳಿಗ್ಗೆ 4.45ಕ್ಕೆ ನಗರದಲ್ಲಿ ಇಳಿಯಿತು. ವಿದೇಶದಲ್ಲಿರುವವರಿಗೆ ಭಾರತ ಪ್ರವೇಶಿಸಲು ನಿರ್ಬಂಧ ವಿಧಿಸಿದ್ದರಿಂದ ಹಲವು ವಾರಗಳನ್ನು ಗೊಂದಲ, ತಳಮಳದಲ್ಲಿಯೇ ಕಳೆದವರು ತಾಯ್ನಾಡಿಗೆ ಕಾಲಿಡುತ್ತಿದ್ದಂತೆಯೇ ಮಂದಹಾಸ ಬೀರಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ (ಎಐ 1803) ಇಳಿಯುತ್ತಿದ್ದಂತೆ, ಎಲ್ಲ ಪ್ರಯಾಣಿಕರಿಗೆ ಥರ್ಮಲ್‌ಸ್ಕ್ಯಾನಿಂಗ್ ಸಹಿತ ಅಗತ್ಯ ಆರೋಗ್ಯ ತಪಾಸಣೆ ಮಾಡಲಾಯಿತು. ಸದ್ಯಕ್ಕೆ ಯಾರಲ್ಲಿಯೂ ಕೊರೊನಾ ಸೋಂಕು ತಗುಲಿರುವ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದರು.

ಪ್ರಯಾಣಿಕರು ನಿಲ್ದಾಣದಿಂದ ಹೊರಬರುವ ಪ್ರವೇಶ ದ್ವಾರದಿಂದ ಹಿಡಿದು, ಬಸ್ ನಿಲುಗಡೆ ಸ್ಥಳದವರೆಗೆ ಬ್ಯಾರಿಕೇಡ್ ಹಾಕಲಾಗಿತ್ತು. ನಿಯಮಿತವಾಗಿ ಈ ಪ್ರದೇಶವನ್ನು ಸೋಂಕು ಮುಕ್ತಗೊಳಿಸಲಾಗುತ್ತಿತ್ತು. ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ADVERTISEMENT

ಪ್ರಯಾಣಿಕರು ಧರಿಸಿದ್ದ ಮುಖಗವಸುಗಳನ್ನು ಬದಲಿಸಿ, ಹೊಸ ಮಾಸ್ಕ್‌ ನೀಡಲಾಯಿತು. ಸಿಮ್‌ಕಾರ್ಡ್‌ ಕೂಡ ಬದಲಿಸಲಾಯಿತು. ಆರೋಗ್ಯ ಸೇತು‌‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಿಮ್‌ ಕಾರ್ಡ್‌ಗಳನ್ನು ಬದಲಿಸಲಾಯಿತು. ಬಿಎಂಟಿಸಿಯ 16 ಬಸ್‌ಗಳಲ್ಲಿ ತಲಾ 20 ಪ್ರಯಾಣಿಕರನ್ನು ಹೋಟೆಲ್‌ಗಳಿಗೆ ಕರೆದೊಯ್ಯಲಾಯಿತು.

ಹೋಟೆಲ್‌ಗಳಲ್ಲಿ ಕ್ವಾರಂಟೈನ್: ನಗರದ18 ಪಂಚತಾರಾ ಹೋಟೆಲ್, 26 ತ್ರಿಸ್ಟಾರ್ ಹೋಟೆಲ್ ಹಾಗೂ 40 ಸಾಧಾರಣ ಹೋಟೆಲ್‌ಗಳ ಎಲ್ಲ ಕೊಠಡಿಗಳನ್ನು ಈ ಪ್ರಯಾಣಿಕರ ಕ್ವಾರಂಟೈನ್‌ಗೆ ಮೀಸಲಿಡಲಾಗಿದೆ. ಪ್ರಯಾಣ ವೆಚ್ಚ ಮತ್ತು ಹೋಟೆಲ್‌ಗಳ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ.

ಪಂಚತಾರಾ ಹೋಟೆಲ್‌ಗಳಿಗೆ ದಿನಕ್ಕೆ ಒಬ್ಬರಿಗೆ ₹3,000, ಒಂದೇ ಕೊಠಡಿಯಲ್ಲಿ ಇಬ್ಬರಿಗೆ ₹3,700 ಶುಲ್ಕ ನಿಗದಿ ಮಾಡಲಾಗಿದೆ. ಉಳಿದ ಸ್ಟಾರ್ ಹೋಟೆಲ್‌ಗಳಲ್ಲಿ ಒಬ್ಬರಿಗೆ, ಒಂದು ಕೋಣೆಗೆ ₹1,850, ಸಾಧಾರಣ ಹೋಟೆಲ್‌ಗಳಿಗೆ ₹700ರಿಂದ ₹900 ಬಾಡಿಗೆಯನ್ನು ಬಿಬಿಎಂಪಿ ನಿಗದಿ ಮಾಡಿದೆ.

ಲಂಡನ್‌ನಿಂದ ಬೆಂಗಳೂರಿಗೆ ಬರಲು ವಿಮಾನ ಪ್ರಯಾಣ ವೆಚ್ಚ ಒಬ್ಬರಿಗೆ ₹55,000. ಕ್ವಾರಂಟೈನ್ ಅವಧಿಯಲ್ಲಿ ಒಬ್ಬ ವ್ಯಕ್ತಿ ಕನಿಷ್ಠ ₹57,400 ವೆಚ್ಚ ಭರಿಸಬೇಕಾಗುತ್ತದೆ.

***

ಸಿಂಗಪುರದಿಂದ ಮಂಗಳವಾರ ಬೆಳಿಗ್ಗೆ 170ಕ್ಕೂ ಹೆಚ್ಚು ಜನ ಬೆಂಗಳೂರಿಗೆ ಬರಲಿದ್ದಾರೆ. ಈ ಸಂಖ್ಯೆಯಲ್ಲಿ ಹೆಚ್ಚಳವೂ ಆಗಬಹುದು.

- ಉಮೇಶ್‌ ಕುಮಾರ್, ಗೃಹ ಇಲಾಖೆ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.