ADVERTISEMENT

ಹಿಂದು ಸಂಸ್ಕೃತಿಯಿಂದ ಬೇರ್ಪಡಿಸುವ ಪ್ರಯತ್ನ: ಕತ್ತಲ್‌ಸಾರ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 21:19 IST
Last Updated 19 ಅಕ್ಟೋಬರ್ 2022, 21:19 IST
ದಯಾನಂದ ಕತ್ತಲ್‌ಸಾರ್
ದಯಾನಂದ ಕತ್ತಲ್‌ಸಾರ್   

ಮಂಗಳೂರು: ‘ದೈವಾರಾಧನೆಯನ್ನು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಹೇಳುವ ಮೂಲಕ ಈ ಆರಾಧನೆಗಳಲ್ಲಿ ತೊಡಗಿರುವವರನ್ನು ದೂರ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಮುಂದುವರಿದರೆ ನೀರಿನಿಂದ ಹೊರ ತೆಗೆದ ಮೀನಿನಂತೆ ನಾವೆಲ್ಲ ವಿಲ ವಿಲ ಒದ್ದಾಡಿ ಸಾಯಬೇಕಾಗುತ್ತದೆ’ ಎಂದು ದೈವದ ಪಾತ್ರಧಾರಿಯೂ ಆಗಿರುವ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅಭಿಪ್ರಾಯಟ್ಟರು.

‘ಕಾಂತಾರ’ ಸಿನಿಮಾದ ನಟ ರಿಷಭ್ ಶೆಟ್ಟಿ ಅವರು ಭೂತಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವುದು ಸರಿಯಲ್ಲ ಎಂದು ನಟ ಚೇತನ್ ಟ್ವೀಟ್ ಮಾಡಿರುವುದರಿಂದ ಎದ್ದಿರುವ ವಿವಾದದ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕತ್ತಲ್‌ಸಾರ್‌, ‘ಎಲ್ಲ ಆರಾಧನೆಗಳಿಗೂ ವೈದಿಕ ಪರಂಪರೆಯೇ ಮೂಲ. ನಾವೆಲ್ಲರೂ ಹಿಂದೂಗಳು. ಹಿಂದೂಗಳು 16 ವರ್ಗಗಳಲ್ಲಿ ವಿಂಗಡಣೆಯಾಗಿದೈವದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂದರು.

‘ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ನಾವೆಲ್ಲರೂ ಪರಿಶಿಷ್ಟರು ಎಂಬ ಕಾರಣಕ್ಕೆ ಹಿಂದೆ ತುಂಬ ಕಷ್ಟಗಳನ್ನು ಅನುಭವಿಸಿದ್ದೇವೆ. ಆ ಕಾಲ ಮುಗಿದು ಹೋಯಿತು. ಸಮುದ್ರದಲ್ಲಿ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತವೆ. ಸಣ್ಣ ಮೀನುಗಳಿಗೆ ಇದರಿಂದ ತಪ್ಪಿಸಿಕೊಳ್ಳುವುದೂ ಗೊತ್ತಿದೆ. ಆದರೆ, ಮೀನನ್ನು ತೆಗೆದು ದಡಕ್ಕೆ ಹಾಕಿದರೆ ವಿಲವಿಲ ಒದ್ದಾಡಿ ಸಾಯಬೇಕಾಗುತ್ತದೆ. ನಮ್ಮನ್ನು ಈಗ ಅದೇ ಪರಿಸ್ಥಿತಿಗೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ನುಡಿದರು.

ADVERTISEMENT

‘ತುಳುನಾಡಿನಲ್ಲಿ ದೈವವೇ ದೇವರು. ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂಬುದು ಈ ಆರಾಧನೆಯ ಹಿಂದಿನ ಆಶಯ. ಪ್ರಕೃತಿ ನಾಶವಾದಾಗ, ಅಂತರ್ಜಲ ಬತ್ತಿದಾಗ, ಗೋ ಸಂತತಿ ಕಡಿಮೆಯಾದಾಗ, ಸತ್ಯ ಸತ್ತು, ಸುಳ್ಳೇ ವಿಜೃಂಭಿಸಿದಾಗ ಕೈಹಿಡಿಯಲು ದೈವ ಬೇಕು ಎಂಬುದು ನಂಬಿಕೆ. ಹೀಗಿರುವಾಗ ವೃಥಾ ವಿವಾದಗಳನ್ನು ಹುಟ್ಟುಕಾಕುವುದು ಸರಿಯಲ್ಲ’ ಎಂದು ಕತ್ತಲ್‌ಸಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.