ADVERTISEMENT

ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದ ಆರೋಪ: ಶಶಿಕಲಾ ಸೇರಿ ಹಲವರ ವಿರುದ್ಧ ಆರೋಪಪಟ್ಟಿ

ಪಿಟಿಐ
Published 3 ಫೆಬ್ರುವರಿ 2022, 13:26 IST
Last Updated 3 ಫೆಬ್ರುವರಿ 2022, 13:26 IST
ವಿ.ಕೆ. ಶಶಿಕಲಾ: ಪಿಟಿಐ ಚಿತ್ರ
ವಿ.ಕೆ. ಶಶಿಕಲಾ: ಪಿಟಿಐ ಚಿತ್ರ   

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಪ್ತ ಸಹಾಯಕಿ ವಿ. ಕೆ. ಶಶಿಕಲಾ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ವಿಶೇಷ ಸೌಲಭ್ಯ ಒದಗಿಸಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಆರೋಪಪಟ್ಟಿ ಸಲ್ಲಿಸಿದೆ.

ಕಾರಾಗೃಹದ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಶಶಿಕಲಾ ಸೇರಿದಂತೆ ಆರು ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎಸಿಬಿ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಬಹುಕೋಟಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ, ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು.

ಜನವರಿ 2021 ರಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

ADVERTISEMENT

ಚೆನ್ನೈ ಮೂಲದ ಸಮಾಜ ಸೇವಕಿ ಮತ್ತು ಶಿಕ್ಷಣತಜ್ಞೆ ಕೆ.ಎಸ್.ಗೀತಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಡಿಸೆಂಬರ್ 30, 2021 ರಂದು ರಾಜ್ಯ ಸರ್ಕಾರವು ಇಬ್ಬರು ಜೈಲು ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಿದ ನಂತರ ಜನವರಿ 7, 2022 ರಂದು ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿದೆ.

ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರು, ಜೈಲಿನೊಳಗೆ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು ವರದಿ ಸಲ್ಲಿಸಿದ್ದರೂ ಸಹ ಎಸಿಬಿ ತನಿಖೆಯನ್ನು ಪೂರ್ಣಗೊಳಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಶಶಿಕಲಾ ಮತ್ತು ಆಕೆಗೆ ಅಕ್ರಮವಾಗಿ ಸವಲತ್ತು ಮತ್ತು ಆದ್ಯತೆ ನೀಡಿದ್ದ ಆರೋಪದಡಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಅಂದಿನ ಮುಖ್ಯ ಅಧೀಕ್ಷಕರಾಗಿದ್ದ ಕೃಷ್ಣಕುಮಾರ್ ಮತ್ತು ಅಧೀಕ್ಷಕಿ ಅನಿತಾ ಅವರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಆರೋಪಪಟ್ಟಿಯಲ್ಲಿ ಶಶಿಕಲಾ ಮತ್ತು ಇಳವರಸಿ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ. ಕಳೆದ ವರ್ಷ ಜುಲೈ 15 ರಂದು ಎಸಿಬಿ ಸಲ್ಲಿಸಿದ ಮಂಜೂರಾತಿ ಕೋರಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯವು ಈ ಹಿಂದೆ ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.