ಬೆಂಗಳೂರು: ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ರಾಜ್ಯದ ನಾಲ್ಕು ಖಾಸಗಿ ಕಾಲೇಜುಗಳಿಗೆ ತಲಾ 50 ಹೆಚ್ಚುವರಿ ಸೀಟು ಮಂಜೂರು ಮಾಡಿದೆ. ಹೊಸದಾಗಿ ಲಭಿಸಿದ ಎಲ್ಲ 200 ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಿದೆ.
ಆಪ್ಷನ್ಸ್ ನಮೂದಿಸಲು ಅ.15ರ ಬೆಳಿಗ್ಗೆ 8ರವರೆಗೆ ಅವಕಾಶ ನೀಡಿದೆ.
ಶಿವಮೊಗ್ಗದ ಸುಬ್ಬಯ್ಯ, ಬೆಂಗಳೂರಿನ ಬಿಜಿಎಸ್, ತುಮಕೂರಿನ ಶ್ರೀದೇವಿ, ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಸೀಟು ಲಭಿಸಿದೆ. ಹೆಚ್ಚುವರಿ ಸೀಟುಗಳೂ ಸೇರಿ 3ನೇ ಸುತ್ತಿಗೆ 377 ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 10,216 ವೈದ್ಯಕೀಯ ಸೀಟುಗಳು ಸಿಕ್ಕಿವೆ.
ಮೊದಲ ಮತ್ತು ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ವರದಿ ಮಾಡಿಕೊಂಡವರು ನಾಲ್ಕು ಕಾಲೇಜುಗಳ ಹೆಚ್ಚುವರಿ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಅ.15ರ ಬೆಳಿಗ್ಗೆ 11ರಿಂದ ಅ.16ರ ಬೆಳಿಗ್ಗೆ 8ರವರೆಗೆ ಆಪ್ಷನ್ಸ್ ದಾಖಲಿಸಬಹುದು. ಮುಂಗಡ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದರೆ, ಯಾರಿಗೆ ಸೀಟು ಹಂಚಿಕೆಯಾಗಿಲ್ಲವೊ ಅಂಥವರು ಮುಂಗಡ ಶುಲ್ಕ ಕಟ್ಟಬೇಕು. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಾಲೇಜುಗಳಿಗೆ ಪ್ರವೇಶ ಪಡೆಯುವುದು ಕಡ್ಡಾಯ. 180 ದಂತ ವೈದ್ಯಕೀಯ ಸೀಟುಗಳು ಹಂಚಿಕೆಗೆ ಲಭ್ಯವಿವೆ ಎಂದು ಕೆಇಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.