ADVERTISEMENT

ಒಳಮೀಸಲಾತಿಯಲ್ಲಿ ಅನ್ಯಾಯ|AICC ಕಚೇರಿ ಆವರಣದಲ್ಲಿ ನಾಳೆಯಿಂದ ಧರಣಿ: ಅಲೆಮಾರಿಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 15:31 IST
Last Updated 10 ಅಕ್ಟೋಬರ್ 2025, 15:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ನವದೆಹಲಿ: ‘ಕರ್ನಾಟಕದಲ್ಲಿ ಒಳಮೀಸಲಾತಿ ನೀಡುವ ಸಂದರ್ಭದಲ್ಲಿ ಅಲೆಮಾರಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ಎಐಸಿಸಿ ಕಚೇರಿ ಆವರಣದಲ್ಲಿ ಶನಿವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು‘ ಎಂದು ಕರ್ನಾಟಕ ಅಸ್ಪ್ರಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ತಿಳಿಸಿದೆ. 

ADVERTISEMENT

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪದಾಧಿಕಾರಿಗಳು, ’ರಾಜ್ಯದ ಕಾಂಗ್ರೆಸ್‌ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ಕೊನೆಯ ಭರವಸೆಯಾಗಿ ದೆಹಲಿಯ ಕದ ತಟ್ಟಲು ಬಂದಿದ್ದೇವೆ. 10 ದಿನಗಳಿಂದ ತಾಳ್ಮೆಯಿಂದ ಕಾಯುತ್ತಾ ಇದ್ದೇವೆ. ನಮ್ಮ ಹಕ್ಕಾದ ಶೇ 1 ಮೀಸಲಾತಿ ಪಡೆಯದೆ ಮರಳುವುದಿಲ್ಲ ಎಂದು ಪಣ ತೊಟ್ಟಿದ್ದೇವೆ‘ ಎಂದರು. 

’ಕರ್ನಾಟಕವು ದಸರಾ ಹಬ್ಬ ಆಚರಿಸುತ್ತಿದೆ. ಅಲೆಮಾರಿ ಸಮುದಾಯದ ನಾವು ಬೀದಿಯಲ್ಲಿ ಕೂತಿದ್ದೇವೆ. ಈ ಬಾರಿ ನಮಗೆ ಹಬ್ಬವಿಲ್ಲ. ಹಬ್ಬದ ಸಂದರ್ಭದಲ್ಲಿ ಆಗುತ್ತಿದ್ದ ವ್ಯಾಪಾರವೂ ಇಲ್ಲ‘ ಎಂದು ಅಳಲು ತೋಡಿಕೊಂಡರು. 

’ನಮ್ಮ ಜನರಿಗೆ ಇಲ್ಲಿಯವರೆಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಹೆಚ್ಚಿನ ಜನರು ಪ್ಲಾಸ್ಟಿಕ್‌ ಶೀಟುಗಳಡಿ ವಾಸಿಸುತ್ತಿದ್ದೇವೆ. ನಮ್ಮ ಸಮುದಾಯದಲ್ಲಿ ಒಬ್ಬ ಉನ್ನತ ಅಧಿಕಾರಿ ಇಲ್ಲ. ಒಬ್ಬ ರಾಜಕೀಯ ಪ್ರತಿನಿಧಿಯೂ ಇಲ್ಲ. ಕೃಷಿ ಮಾಡಲು ಭೂಮಿ ಇಲ್ಲ, ವ್ಯಾಪಾರ ಮಾಡಲು ಬಂಡವಾಳ ಇಲ್ಲ. ಬಣ್ಣ ಕಟ್ಟಿ ಭಿಕ್ಷೆಗಾಗಿ ಊರೂರು ಅಲೆಯುತ್ತೇವೆ‘ ಎಂದು ಅವರು ಹೇಳಿದರು. 

‘ಮೈಸೂರು ದಸರಾದ ಸಂದರ್ಭದಲ್ಲಿ ಬಲೂನು ಮಾಡಲು ಕಲಬುರ್ಗಿಯಿಂದ ಬಂದಿದ್ದ ಅಲೆಮಾರಿ ಕುಟುಂಬದ ಒಂಬತ್ತು ವರ್ಷದ ಬಾಲಕಿಯ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಆದರೆ, ಅಪರಾಧಿ ಯಾರು? ಆ ಕುಡುಕ ಮಾತ್ರವಾ? ಅಥವಾ ನಮ್ಮನ್ನು ಇಂದಿಗೂ ಬೀದಿಗಳಲ್ಲೇ ಉಳಿಸಿರುವ ಈ ವ್ಯವಸ್ಥೆಯಾ? ಈ ಸಮಾಜವಾ?‘ ಎಂದು ಅವರು ಪ್ರಶ್ನಿಸಿದರು. 

’ಮೀಸಲಾತಿಗಾಗಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದೆವು. ಕಾಂಗ್ರೆಸ್‌ ಮುಖಂಡರು ಮಾತುಕತೆ ನಡೆಸಿದ್ದರು. ಆದರೆ, ಈವರೆಗೆ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ನಮ್ಮ ಸಂಕಷ್ಟ ಹೇಳಿಕೊಳ್ಳಲು ಕಾಯುತ್ತಿದ್ದೇವೆ. ಕಾಂಗ್ರೆಸ್‌ನ ಉನ್ನತ ನಾಯಕರನ್ನು ಭೇಟಿ ಮಾಡಿ ನಮ್ಮ ಹಕ್ಕನ್ನು ಪಡೆದೇ ಹಿಂತಿರುಗುತ್ತೇವೆ‘ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ನೂರ್ ಶ್ರೀಧರ್‌, ಪದಾಧಿಕಾರಿಗಳಾದ ಮಂಜುನಾಥ ದಾಯತ್ಕರ್‌, ಬಸವರಾಜ ನಾರಾಯಣ್ಕರ್‌, ಮಂಡ್ಯ ರಾಜಣ್ಣ, ಸಂದೀಪ್‌ ಕುಮಾರ್, ಶರಣಪ್ಪ ತುಮ್ಮರ್‌ಗುದ್ದಿ, ಕರಿಯಪ್ಪ ಗುಡಿಮನಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.