ADVERTISEMENT

ಕರ್ನಾಟಕ– ಆಂಧ್ರ ಗಡಿ ಗುರುತಿಸುವಿಕೆಯಲ್ಲಿ ಲೋಪ: ಟಪಾಲ್‌ ಗಣೇಶ್‌

ಡೆಪ್ಯುಟಿ ಸರ್ವೇಯರ್‌ ಜನರಲ್‌ಗೆ ರಾಜ್ಯದ ಪತ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:14 IST
Last Updated 26 ಅಕ್ಟೋಬರ್ 2021, 19:14 IST
ಟಪಾಲ್‌ ಗಣೇಶ್‌
ಟಪಾಲ್‌ ಗಣೇಶ್‌   

ಬಳ್ಳಾರಿ: ‘ಕರ್ನಾಟಕ ಹಾಗೂ ಆಂಧ್ರ ನಡುವಿನ ಅಂತರರಾಜ್ಯ ಗಡಿಯನ್ನು ನಿಖರವಾಗಿ ಗುರುತಿಸಿಲ್ಲ ಎಂದು ಅಕ್ರಮ ಗಣಿಗಾರಿಕೆ ವಿರೋಧಿ ಹೋರಾಟಗಾರ ಟಪಾಲ್‌ ಗಣೇಶ್‌ ಆಕ್ಷೇಪ ಎತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳ ತಾಂತ್ರಿಕ ಸಲಹೆಗಾರ ಹೈದರಾಬಾದ್‌ನಲ್ಲಿರುವ ಡೆಪ್ಯುಟಿ ಸರ್ವೇಯರ್‌ ಜನರಲ್‌ಗೆ ಪತ್ರ ಬರೆದಿದ್ದಾರೆ.

‘ಉಭಯ ರಾಜ್ಯಗಳ ಗಡಿಗಳನ್ನು ಗುರುತಿಸುವಾಗ ಮೂಲ ಗಡಿ ಕಲ್ಲುಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. 63ರಿಂದ 67ನೇ ಸಂಖ್ಯೆಯ ಗಡಿ ಕಲ್ಲುಗಳನ್ನು ಪಲ್ಲಟ ಮಾಡಲಾಗಿದ್ದು, ಕರ್ನಾಟಕದ ಕಡೆ 400 ಮೀಟರ್‌ ವ್ಯತ್ಯಾಸವಾಗಿದೆ. ಇದರಿಂದಾಗಿ ಅಕ್ರಮ ಗಣಿಗಾರಿಕೆ ಸಕ್ರಮಗೊಳ್ಳಲಿದೆ’ ಎಂದು ಟಪಾಲ್‌ ಗಣೇಶ್‌ ಎತ್ತಿರುವ ಆಕ್ಷೇಪವನ್ನು ಡೆಪ್ಯುಟಿ ಸರ್ವೇಯರ್‌ಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

‘ಕರ್ನಾಟಕ– ಆಂಧ್ರ ಗಡಿ ಗುರುತಿಸುವಲ್ಲಿ ಆಗಿರುವ ಲೋಪ ಕುರಿತು ಟಪಾಲ್‌ ಗಣೇಶ್‌, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಮುಖ್ಯ ಕಾರ್ಯದರ್ಶಿ ಅವರ ಸೂಚನೆ ಮೇಲೆ ಈ ಪತ್ರ ಬರೆಯಲಾಗುತ್ತಿದೆ. ಸಮೀಕ್ಷೆ ಕುರಿತ ಆಕ್ಷೇಪ ಸಂಬಂಧ ಸೂಕ್ತ ಕ್ರಮ ಕೈಗೊಂಡು ತಮ್ಮ ಕಚೇರಿಗೆ ತಿಳಿಸಬೇಕು’ ಎಂದೂ ಪತ್ರದಲ್ಲಿ ಹೇಳಲಾಗಿದೆ.

ADVERTISEMENT

‘ಕಳೆದ ಜೂನ್‌ 24ರಂದು ನಿಮಗೆ ಪತ್ರ ಬರೆಯಲಾಗಿತ್ತು. ಆದರೆ, ಈ ಬಗ್ಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದಾಗಿ ಮತ್ತೊಂದು ಪತ್ರ ಬರೆಯಲಾಗುತ್ತಿದೆ’ ಎಂದೂ ಹೇಳಲಾಗಿದೆ. ರಾಜ್ಯದಲ್ಲಿ ವ್ಯಾಪಕವಾಗಿ ನಡೆದಿದ್ದ ಅಕ್ರಮ ಗಣಿಗಾರಿಕೆ ಸಂದರ್ಭದಲ್ಲಿ ಕರ್ನಾಟಕ ಮತ್ತು ಆಂಧ್ರದ ಅಂತರರಾಜ್ಯ ಗಡಿಯನ್ನೂ ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸರ್ವೆ ಆಫ್‌ ಇಂಡಿಯಾ ಉಭಯ ರಾಜ್ಯಗಳ ಗಡಿ ಸಮೀಕ್ಷೆ ನಡೆಸಿತ್ತು.

ಕೋರ್ಟ್‌ಗೆ ಮೊರೆ: ಎರಡೂ ರಾಜ್ಯಗಳ ನಡುವಿನ ಗಡಿ ಗುರುತಿಸುವಿಕೆಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ ಮುಂದಿದ್ದು, ಗಡಿ ಗುರುತಿಸುವಲ್ಲಿ ಆಗಿರುವ ಲೋಪ ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋ‌ಗುವುದಾಗಿ ಟ‍ಪಾಲ್‌ ಗಣೇಶ್‌ ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು.

‘ಸರ್ವೆ ಆಫ್‌ ಇಂಡಿಯಾದ ಅಧಿಕಾರಿಗಳು ಗಡಿ ಗುರುತಿಸುವಾಗ ಯಾವುದೋ ಒತ್ತಡಕ್ಕೆ ಒಳಗಾಗಿದ್ದಾರೆ. ಅಕ್ರಮ ಗಣಿಗಾರಿಕೆ ₹3,500 ಕೋಟಿ ಹಗರಣವಾಗಿದ್ದು, ಇದನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಮಟ್ಟ ಹಾಕಲು ಗಡಿಗಳನ್ನು ನಿಖರವಾಗಿ ಗುರುತಿಸಬೇಕು’ ಎಂದೂ ಅವರು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.