ಬೆಂಗಳೂರು: ವಸತಿ ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್ ಮಾಲೀಕರ ಸಂಘವನ್ನು, ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಶಿಪ್ ಕಾಯ್ದೆ–1972ರ (ಕೆಎಒ) ಅಡಿಯಲ್ಲಿಯೇ ನೋಂದಾಯಿಸಬೇಕು’ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಈ ಸಂಬಂಧ ಯಲಹಂಕದ ಆವಲಹಳ್ಳಿಯ ‘ರಾಮ್ಕಿ ಒನ್ ನಾರ್ಥ್ ಅಪಾರ್ಟ್‌ಮೆಂಟ್’ ಮಾಲೀಕರ ಸಂಘದ ರೇಖಾ ಕಣ್ಣನ್ ಸೇರಿದಂತೆ ಐವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು (ಡಬ್ಲ್ಯು.ಪಿ.27821/2024 ಸಿಎಸ್-ಆರ್‌ಇಎಸ್) ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಇದೇ ವೇಳೆ ನ್ಯಾಯಪೀಠವು, ಅರ್ಜಿದಾರರು ಕರ್ನಾಟಕ ಸಹಕಾರ ಸೊಸೈಟಿಗಳ ಕಾಯ್ಡೆ–1959ರ (ಕೆಸಿಎಸ್) ಅಡಿಯಲ್ಲಿ ತಮ್ಮ ಅಪಾರ್ಟ್‌ಮೆಂಟ್ ಮಾಲೀಕರ ಸಂಘವನ್ನು ನೋಂದಣಿ ಮಾಡಿಸಿದ್ದ ಕ್ರಮವನ್ನು ರದ್ದುಪಡಿಸಿದೆ.
‘ಕೆಸಿಎಸ್ ಕಾಯ್ದೆ ಅಡಿ ವಸತಿ ಸಮುಚ್ಚಯಗಳ ಸಂಘಗಳ ನೋಂದಣಿಗೆ ಅವಕಾಶವಿಲ್ಲ. ವಸತಿ ಸಮುಚ್ಚಯಗಳಿಗೆಂದೇ ಕೆಎಒ ಕಾಯ್ದೆಯನ್ನು ರೂಪಿಸಲಾಗಿದೆ. ಹಾಗಾಗಿ, ಅರ್ಜಿದಾರರು ತಮ್ಮ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್ ಅನ್ನು ಕೆಎಒ ಕಾಯ್ದೆ ಅಡಿಯಲ್ಲಿ ನೋಂದಾಯಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.