ADVERTISEMENT

Karnataka Assembly | ಪೊಲೀಸ್‌ ಅಧಿಕಾರಿಗಳ ಕನಿಷ್ಠ ಸೇವಾವಧಿ ಎರಡು ವರ್ಷ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 23:30 IST
Last Updated 21 ಫೆಬ್ರುವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಂದ ಎಸ್‌ಪಿವರೆಗಿನ ಅಧಿಕಾರಗಳ ಕನಿಷ್ಠ ಸೇವಾವಧಿಯನ್ನು ಎರಡು ವರ್ಷಗಳಿಗೆ ಹೆಚ್ಚಿಸುವ ‘ಕರ್ನಾಟಕ ಪೊಲೀಸು (ತಿದ್ದುಪಡಿ) ಮಸೂದೆ–2024’ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.

ಕರ್ನಾಟಕ ಪೊಲೀಸ್‌ ಕಾಯ್ದೆ–1963ಕ್ಕೆ ತಿದ್ದುಪಡಿಯನ್ನು ತರಲಾಗಿದೆ. ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿ, ಹೆಚ್ಚುವರಿ ಎಸ್‌ಪಿ ಮತ್ತು ಎಸ್‌ಪಿಗಳನ್ನು ಎರಡು ವರ್ಷಕ್ಕಿಂತ ಮೊದಲು ವರ್ಗಾವಣೆ ಮಾಡುವುದನ್ನು ಈ ತಿದ್ದುಪಡಿ ನಿರ್ಬಂಧಿಸಲಿದೆ.

ADVERTISEMENT

‘ಈಗ ಒಂದು ವರ್ಷ ಕನಿಷ್ಠ ಸೇವಾವಧಿ ಇದೆ. ಅವಧಿಗಿಂತ ಮೊದಲೇ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಒತ್ತಡ ಹೆಚ್ಚಿರುತ್ತದೆ. ಕೆಲವು ಅಧಿಕಾರಿಗಳು ವರ್ಗಾವಣೆ ಆದೇಶ ಹಿಡಿದು ಬರುತ್ತಾರೆ. ಇದರಿಂದ ಉಳಿದ ಅಧಿಕಾರಿಗಳಿಗೆ ತೊಂದರೆಯಾಗುತ್ತದೆ. ಪೊಲೀಸ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆ, ಸಂಗತಿಗಳನ್ನು ಅರಿತುಕೊಂಡು ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಎರಡು ವರ್ಷಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸಲಾಗುತ್ತಿದೆ’ ಎಂದು ಮಸೂದೆ ಮಂಡಿಸಿದ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

‘ಹಿಂದೆ ಎರಡು ವರ್ಷ ಕನಿಷ್ಠ ಸೇವಾವಧಿ ಇತ್ತು. ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಕೆ.ಜೆ. ಜಾರ್ಜ್‌ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಒಂದು ವರ್ಷಕ್ಕೆ ಇಳಿಸಲಾಗಿತ್ತು. ಅದನ್ನು ಪುನಃ ಎರಡು ವರ್ಷಕ್ಕೆ ಹೆಚ್ಚಿಸಲು ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿತ್ತು. ಆ ತಿದ್ದುಪಡಿಯನ್ನು ಈಗ ತರಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

ಎಂಜಿನಿಯರ್‌ಗಳ ಪರಿಷತ್ತಿಗೆ ಮಸೂದೆ: ವೃತ್ತಿಪರ ಸಿವಿಲ್‌ ಎಂಜಿನಿಯರ್‌ಗಳ ನೋಂದಣಿಗಾಗಿ ಪ್ರತ್ಯೇಕ ಪರಿಷತ್‌ ಅನ್ನು ಅಸ್ತಿತ್ವಕ್ಕೆ ತರುವ ಹಾಗೂ ಎಂಜಿನಿಯರ್‌ಗಳಿಗೆ ನೈತಿಕತೆ ಮತ್ತು ನೀತಿಸಂಹಿತೆ ನಿಯಮಗಳನ್ನು ರೂಪಿಸಿ, ಜಾರಿಗೊಳಿಸುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರ್‌ಗಳ ಮಸೂದೆ–2024’ಕ್ಕೂ ವಿಧಾನಸಭೆ ಒಪ್ಪಿಗೆ ನೀಡಿತು.

ಅಂತರ್‌ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಸಹ ಕುಲಪತಿ ನೇಮಕಕ್ಕೆ ಅವಕಾಶ ಕಲ್ಪಿಸುವ (ತಿದ್ದುಪಡಿ) ಮಸೂದೆ, ಕೃಷಿ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ ‘ಮಾರುಕಟ್ಟೆ ಅಭಿವೃದ್ಧಿ ನೆರವು ನಿಧಿ’ ರಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆ– 2024’ಕ್ಕೂ ಸದನವು ಅಂಗೀಕಾರ ನೀಡಿತು.

30 ಕಾಯ್ದೆಗಳ ರದ್ಧತಿ: ಬ್ರಿಟಿಷ್‌ ಆಡಳಿತ ಕಾಲದಿಂದ 2014ರವರೆಗಿನ ಅವಧಿಯಲ್ಲಿ ಜಾರಿಯಾಗಿದ್ದ 30 ಕಾಯ್ದೆಗಳನ್ನು ರದ್ದುಗೊಳಿಸುವ ‘ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ಮಸೂದೆ–2024’ಕ್ಕೂ ವಿಧಾನಸಭೆ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.