ADVERTISEMENT

ಮೋದಿ ಕಾರ್ಯಕ್ರಮಕ್ಕೆ ತಂತ್ರ: ಕಾಂಗ್ರೆಸ್ ‘ಪ್ರಜಾಧ್ವನಿ’, ಜೆಡಿಎಸ್‌ನಿಂದ ಬಾಡೂಟ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:32 IST
Last Updated 9 ಮಾರ್ಚ್ 2023, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಇದೇ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದಲ್ಲಿ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯ ಉದ್ಘಾಟನೆ ಮೂಲಕ ಬಿಜೆಪಿ ಪರ ಚುನಾವಣಾ ರಣಕಹಳೆ ಮೊಳಗಿಸಲಿದ್ದು, ಇದಕ್ಕೆ ಪ್ರತಿಯಾಗಿ ಜಿಲ್ಲೆಯಲ್ಲಿ ಸಮಾವೇಶದ ಮೂಲಕವೇ ಸೆಡ್ಡು ಹೊಡೆಯಲು ಜೆಡಿಎಸ್‌ ಸಿದ್ಧತೆ ನಡೆಸಿದೆ.

ಹಾರೋಹಳ್ಳಿಯಲ್ಲಿ ಅದೇ ದಿನ ಬೃಹತ್‌ ಸಮಾವೇಶಕ್ಕೆ ಜೆಡಿಎಸ್‌ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿ ಆಗಿದ್ದಾಗ ಹಾರೋಹಳ್ಳಿಗೆ ತಾಲ್ಲೂಕಿನ ಸ್ಥಾನಮಾನ ಘೋಷಿಸಿದ್ದ ಎಚ್‌.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ದಂಪತಿಗೆ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ನಡೆಯಲಿರುವ ಈ ಸಮಾವೇಶವು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಆಗಲಿದೆ.

30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದ್ದು ಎಲ್ಲರಿಗೂ ಬಾಡೂಟದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ರಾಮನಗರ ಕ್ಷೇತ್ರದ ಜೆಡಿಎಸ್

ADVERTISEMENT

ಅಭ್ಯರ್ಥಿ ಆಗಿರುವ ನಿಖಿಲ್‌ ಕುಮಾರಸ್ವಾಮಿ ಈ ಕಾರ್ಯಕ್ರಮದ ನೇತೃತ್ವವಹಿಸಿದ್ದಾರೆ.

ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಬಹುದಿನಗಳ ತರುವಾಯ ಮತ್ತೆ ರಾಜಕೀಯ ಪ್ರಚಾರಕ್ಕೆ ಇಳಿಯಲಿದ್ದಾರೆ. ಇದೇ 26ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ಯಾತ್ರೆ ಸಮಾರೋಪದ ಅಂಗವಾಗಿ ಕುಂಬಳಗೋಡಿನಿಂದ ಮೈಸೂರುವರೆಗೆ ದಶಪಥ ಹೆದ್ದಾರಿಯ 100 ಕಿ.ಮೀ ಉದ್ದಕ್ಕೂ ಮೆರವಣಿಗೆಯಲ್ಲಿ ತೆರಳಲಿದ್ದಾರೆ.

ಪ್ರಜಾಧ್ವನಿ ಸದ್ದು: ಮತ್ತೊಂದೆಡೆ ಮೋದಿ ಪ್ರವಾಸಕ್ಕೂ ಮುನ್ನವೇ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಸದ್ದು ಮಾಡಲು ಕಾಂಗ್ರೆಸ್ ಸಜ್ಜಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.

ಇದೇ 10ರಂದು ಮಾಗಡಿ ವಿಧಾನಸಭಾ ಕ್ಷೇತ್ರದಾದ್ಯಂತ ಮೂರು ಕಡೆಗಳಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಶಿವಕುಮಾರ್ ಜೊತೆಗೆ ಕಾಂಗ್ರೆಸ್‌ ನಾಯಕರಾದ ಡಾ.ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಡಿ.ಕೆ. ಸುರೇಶ್‌ ಸಾಥ್ ನೀಡಲಿದ್ದಾರೆ. ಇದೇ 11ರಂದು ರಾಮನಗರ ಕ್ಷೇತ್ರದ ವ್ಯಾಪ್ತಿಯ ಹಾರೋಹಳ್ಳಿ ಹಾಗೂ ರಾಮನಗರದಲ್ಲಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.

ಕಮಲ ಅರಳಿಸಲು ಪ್ರಯತ್ನ

ಹಳೇ ಮೈಸೂರು ಪ್ರಾಂತ್ಯ ಕಾಂಗ್ರೆಸ್‌– ಜೆಡಿಎಸ್‌ನ ಭದ್ರಕೋಟೆ. ಇಲ್ಲಿ ಸದೃಢವಾಗಿ ಕಮಲ ಅರಳಿರುವುದು ವಿರಳ. ಹೀಗಾಗಿ, ಮೈಸೂರು ಪ್ರಾಂತ್ಯದಲ್ಲಿ ನಿರಂತರ ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದ್ದು, ಇದೀಗ ಮೋದಿ ಅವರನ್ನೇ ಮಂಡ್ಯ ಅಂಗಳಕ್ಕೆ ಕರೆ ತರುತ್ತಿದೆ.

ಬೆಂಗಳೂರು–ಮೈಸೂರು ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 50 ಕಿ.ಮೀಗೂ ಹೆಚ್ಚು ದೂರ ಹಾದುಹೋಗಿದೆ. ಹೀಗಾಗಿ, ರಾಮನಗರ– ಮಂಡ್ಯ ನಡುವಿನ ಭಾಗದಲ್ಲಿ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಪ್ರಯತ್ನಿಸಿದ್ದರು.

ಚನ್ನಪಟ್ಟಣ– ಮದ್ದೂರು ನಡುವಿನ ನಿಡಘಟ್ಟ ಇಲ್ಲವೇ ಬೇರೊಂದು ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಭಾವಿಸಲಾಗಿತ್ತು. ಅದು ಕೈಗೂಡಲಿಲ್ಲ. ಬಳಿಕ ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿ.ವಿ ಕ್ಯಾಂಪಸ್‌ಗೆ ಪ್ರಧಾನಿಯಿಂದಲೇ ಶಂಕುಸ್ಥಾಪನೆ ನೆರವೇರಿಸುವ ಪ್ರಯತ್ನ ನಡೆದಿದ್ದು, ಫಲ ನೀಡಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರನ್ನು ಇಲ್ಲಿಗೆ ಕರೆತರುವ ಇರಾದೆ ಬಿಜೆಪಿ ನಾಯಕರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.