ADVERTISEMENT

ಕಾಂಗ್ರೆಸ್ ಸೇರ್ಪಡೆ ಮಾಧ್ಯಮ ಸೃಷ್ಟಿ: ಬಿಜೆಪಿ ಮೇಲೆ ಅಸಮಾಧಾವಿಲ್ಲ: ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:45 IST
Last Updated 7 ಮಾರ್ಚ್ 2023, 19:45 IST
ವಿ. ಸೋಮಣ್ಣ
ವಿ. ಸೋಮಣ್ಣ   

ರಾಮನಗರ: ‘ನನ್ನ ಮನಸ್ಸು ಹಾಗೂ ಆರೋಗ್ಯ ಎರಡೂ ಸರಿ ಇಲ್ಲ. ಹೀಗಾಗಿ ಪಕ್ಷದ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿಲ್ಲ. ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಸದ್ಯ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಕಾಂಗ್ರೆಸ್ ಸೇರ್ಪಡೆ ವದಂತಿ ಕುರಿತು ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ನನಗೂ ಕೆಲವು ನಿಬಂಧನೆ, ನಿರ್ಧಾರಗಳಿವೆ. ವೈಯಕ್ತಿಕವಾಗಿ ಕೆಲವೊಂದು ವಿಚಾರಗಳಲ್ಲಿ ನೋವು ಇರುತ್ತದೆ. ಅದೆಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಲು ಆಗುವುದಿಲ್ಲ’ ಎಂದರು.

75 ವರ್ಷ ಮೀರಿದವರಿಗೆ ಹಾಗೂ ಹಾಲಿ ಶಾಸಕರಲ್ಲಿ ಕೆಲವರಿಗೆ ಪಕ್ಷ ಟಿಕೆಟ್ ನೀಡುವುದಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದರ ಬಗ್ಗೆ ನನಗೆ ಗೊತ್ತಿಲ್ಲ. ನನಗಿನ್ನೂ 72 ವರ್ಷವಷ್ಟೇ’ ಎಂದರು.

ADVERTISEMENT

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ‘ಸೋಮಣ್ಣ ಕನಕಪುರ ತಾಲ್ಲೂಕಿನ ಮಗ. ಅವರನ್ನು ನಮ್ಮ ಕುಟುಂಬದ ಸದಸ್ಯ ಎಂದು ಭಾವಿಸಿದ್ದೇವೆ. ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಗೊತ್ತಿಲ್ಲ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ’ ಎಂದರು.

ಬಿಜೆಪಿ ಮೇಲೆ ಅಸಮಾಧಾವಿಲ್ಲ: ‘ಬಿಜೆಪಿ ಮೇಲೆ ನನಗೆ ಅಸಮಾಧಾನವಿಲ್ಲ. ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಪಾಲ್ಗೊಂಡಿದ್ದೇನೆ’ ಎಂದು ಸೋಮಣ್ಣ ಆನೇಕಲ್‌ನಲ್ಲಿ ಹೇಳಿದರು.

‘ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಅಭಿಮಾನವಿದೆ. ನನ್ನ ಕ್ಷೇತ್ರದಲ್ಲಿ ಪಕ್ಷೇತರನಾಗಿಯೂ ಗೆದ್ದಿದ್ದೇನೆ. ಚುನಾವಣೆ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಭಗವಂತ ನೀಡಿದ್ದಾನೆ’ ಎಂದರು.

‘ಹೆದ್ದಾರಿ ಉದ್ಘಾಟನೆಗೆ ಆಹ್ವಾನಿಸಿಲ್ಲ’
‘ಇದೇ 12ರಂದು ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ. ಇದೇನು ಬಿಜೆಪಿ ಕಾರ್ಯಕ್ರಮನಾ’ ಎಂದು ಸಂಸದ ಡಿ.ಕೆ ಸುರೇಶ್ ಪ್ರಶ್ನಿಸಿದರು. ‘ಈ ರಸ್ತೆ ಎಲ್ಲರಿಂದಲೂ ಆಗಿದೆ. ನಮ್ಮ ಸರ್ಕಾರ ಭೂಸ್ವಾಧೀನ ಕಾಯ್ದೆ ಜಾರಿಗೆ ಮಾಡಲಿಲ್ಲ ಎಂದರೆ ಇವರು ರಸ್ತೆ ಮಾಡಲು ಆಗುತ್ತಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಸಾಕಷ್ಟು ಸಹಕಾರ ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.