ADVERTISEMENT

ವಿಧಾನಸಭೆ ಚುನಾವಣೆ | ನಾನು ಎಲೆಕ್ಷನ್‌ ಸ್ಟ್ರಾಟಜಿ ಮಾಸ್ಟರ್‌: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 23:44 IST
Last Updated 16 ಮಾರ್ಚ್ 2023, 23:44 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಕ್ಷದ ವರಿಷ್ಠರು ಹೊಣೆಗಾರಿಕೆ ನೀಡಿದ್ದು, ಆ ಬಗ್ಗೆಯೇ ಹೆಚ್ಚಿನ ಗಮನಹರಿಸುವೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ತಮ್ಮ ದೆಹಲಿ ಪ್ರವಾಸದ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗೃಹ ಸಚಿವ ಅಮಿತ್‌ ಶಾ ಅವರ ಜತೆಗಿನ ಮಾತುಕತೆ ಸಮಾಧಾನವುಂಟು ಮಾಡಿದೆ. ಮುಂದಿನ ಮೂರು ತಿಂಗಳು ಮೌನವಾಗಿದ್ದು, ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದ್ದಾರೆ. ಆದ್ದರಿಂದ ಯಾರ ಬಗ್ಗೆಯೂ ಟೀಕೆ– ಟಿಪ್ಪಣಿಗಳನ್ನು ಮಾಡದೇ, ವರಿಷ್ಠರು ಹೇಳಿರುವ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದರು.

‘ಅಮಿತ್‌ ಶಾ ಸೇರಿ ಎಲ್ಲ ವರಿಷ್ಠರಿಗೂ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಮೈಸೂರು, ಚಾಮರಾಜನಗರ, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ನನ್ನದೇ ಆದ ಶಕ್ತಿ ಇದೆ. ನನಗೆ ವಹಿಸಿದ ಹಲವು ಉಪಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇನೆ. ಪಕ್ಷಕ್ಕೆ ಅಪಚಾರ ಮಾಡಿಲ್ಲ. ಕೆಲವು ಬೆಳವಣಿಗೆಗಳಿಂದ ಬೇಸರ ಆಗಿತ್ತು. ಈಗ ಎಲ್ಲವೂ ಸರಿ ಹೋಗಿದೆ’ ಎಂದರು.

ADVERTISEMENT

‘ಜೆ.ಎಚ್‌. ಪಟೇಲ್‌, ಎಚ್‌.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದೇನೆ. ನಾನು ಎಲೆಕ್ಷನ್‌ ಸ್ಟ್ರಾಟಜಿ ಮಾಸ್ಟರ್‌, ಉಪಚುನಾವಣೆಗಳಲ್ಲಿ ಹೇಗೆ ಕೆಲಸ ಮಾಡುತ್ತೇನೆ ಅಂತಾ ಎಲ್ಲ ಪಕ್ಷದವರಿಗೂ ಗೊತ್ತಿದೆ. ಮೂರು ಪಕ್ಷಗಳಲ್ಲಿಯೂ ಕೆಲಸ ಮಾಡಿ ಗೊತ್ತಿದೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರಿಗೆ ಯಡಿಯೂರಪ್ಪ ಅವರೇ ಸಾಟಿ. ಸೋಮಣ್ಣನಿಗೆ ಸೋಮಣ್ಣನೇ ಸರಿಸಾಟಿ. ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರಿನ್ನೂ ಯುವಕ, ಬೆಳೆಯಬೇಕಾದವರು’ ಎಂದರು.

‘ನನ್ನ ಮಗನ ರಾಜಕೀಯ ಭವಿಷ್ಯ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ನನ್ನ ಮಗನೂ ಯಾವತ್ತೂ ಯಾವುದಕ್ಕೂ ಆಸೆ ಪಟ್ಟವನಲ್ಲ ಎಂದು ಅವರು ಪ್ರಶ್ನೆ
ಯೊಂದಕ್ಕೆ ಉತ್ತರಿಸಿದರು. ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿರಲಿಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ’ ಎಂದು ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.